ADVERTISEMENT

ಹಕ್ಕುಪತ್ರಕ್ಕೆ ರಾಜೀವ್ ಗಾಂಧಿ ವಸತಿ ನಿಗಮ ನಕಾರ

ಸರ್ಕಾರಿ ಮತ್ತು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 16:16 IST
Last Updated 6 ಜೂನ್ 2019, 16:16 IST
ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಮನೆಗಳಿಗೆ ಹಕ್ಕು ಪತ್ರಗಳಿಲ್ಲದಿರುವ ಅಂಬೇಡ್ಕರ್ ನಗರ ಬಡಾವಣೆಯ ಒಂದು ನೋಟ
ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ಮನೆಗಳಿಗೆ ಹಕ್ಕು ಪತ್ರಗಳಿಲ್ಲದಿರುವ ಅಂಬೇಡ್ಕರ್ ನಗರ ಬಡಾವಣೆಯ ಒಂದು ನೋಟ   

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯ ಸರ್ಕಾರಿ ಮತ್ತು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಲು ರಾಜೀವ್ ಗಾಂಧಿ ವಸತಿ ನಿಗಮ ನಿರಾಕರಣೆ ಮಾಡಿದ್ದು, ನಿವಾಸಿಗಳಿಗೆ ಭಾರಿ ನಿರಾಸೆಯಾಗಿದೆ.

ಪಟ್ಟಣದ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿಪಟ್ಟಣ ಪಂಚಾಯಿತಿಗೆ ಸೇರಿದ ಜಾಗ, ಸರ್ಕಾರಿ ಹಾಗೂ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ 70 ವರ್ಷಕ್ಕೂ ಅಧಿಕ ಅವಧಿಯಲ್ಲಿ ಸಾಕಷ್ಟು ಜನರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರೂ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಪ್ರಮುಖವಾಗಿ ಅಂಬೇಡ್ಕರ್ ನಗರದಲ್ಲಿ 68, ಹಿಳುವಳ್ಳಿ ಸರ್ವೆ ನಂ. 200ರಲ್ಲಿ 58, ವಾರ್ಡ್ ನಂ. 3 ಬಾವಿಹಟ್ಟಿಯಲ್ಲಿ 13, ವಾರ್ಡ್ ನಂ. 6ರ ಬೆಟ್ಟಗೆರೆಯಲ್ಲಿ 63, ವಾರ್ಡ್ ನಂ. 8ರ ಮಾರಿಗದ್ದಿಗೆ ರಸ್ತೆ ಆಚಾರಿ ಕಾಲೊನಿಯಲ್ಲಿ 20, ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ 1, ವಡ್ಡರ ಕಾಲೊನಿಯಲ್ಲಿ 3,ಮಜೀದ್ ಮೊಹಲ್ಲದಲ್ಲಿ 1 ಒಟ್ಟು 227 ಫಲಾನುಭವಿಗಳು ವಾಸವಾಗಿದ್ದಾರೆ. ಇವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಾಗಿದ್ದು, ಇವರಿಗೆ ಇದುವರೆಗೂ ವಾಸ ಮಾಡುವ ಮನೆಗೆ ಹಕ್ಕು ಪತ್ರ ದೊರೆತಿಲ್ಲ.

ಹಕ್ಕುಪತ್ರ ಇಲ್ಲದಿರುವುದರಿಂದ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದರು. ಈ ಎಲ್ಲಾ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ನೀಡಲು 2018 ಅಕ್ಟೋಬರ್ 27 ರಂದು ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಗರ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ವಾಸವಿರುವ ವಿಸ್ತೀರ್ಣದಲ್ಲಿ ಆಶ್ರಯ ಮಾರ್ಗ ಸೂಚಿಯಂತೆ ಮಂಜೂರಾತಿಗೆ ಅರ್ಹವಿರುವ 20x30 ಅಡಿ (600 ಚದರ ಅಡಿಗೆ) ಹಕ್ಕುಪತ್ರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ ಈ ಪ್ರಸ್ತಾವನೆಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸಿದ್ದರು.

ADVERTISEMENT

ಕಳೆದ ಮೇ 4ರಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಹಿಂಬರಹ ನೀಡಿರುವ ವಸತಿ ನಿಗಮ, ಸರ್ಕಾರಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡಲು ವಸತಿ ಇಲಾಖೆಯಲ್ಲಿ ಯಾವುದೇ ಅವಕಾಶ ಇರುವುದಿಲ್ಲ. ಸರ್ಕಾರಿ ಆದೇಶದಂತೆ 94ಸಿಸಿ, ಕರ್ನಾಟಕ ಲ್ಯಾಂಡ್ ರೆವಿನ್ಯೂ ಆ್ಯಕ್ಟ್ ಪ್ರಕಾರ ಸರ್ಕಾರಿ ಜಾಗ ಸಕ್ರಮಗೊಳಿಸುವ ಬಗ್ಗೆ ಪರಿಶೀಲಿಸಿ ನಿಮ್ಮ ಹಂತದಲ್ಲಿಯೇ ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಿ, ಪ್ರಸ್ತಾವನೆ ಹಿಂದಿರುಗಿಸಲಾಗಿದೆ ಎಂದು ತಿಳಿಸಿದೆ.

ಕಳೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಆಡಳಿತ ಮತ್ತು ವಿರೋಧಪಕ್ಷಗಳು ಬಡಾವಣೆ ನಿವಾಸಿಗಳಿಂದ ಮತಯಾಚಿಸಿದ್ದವು. ಜನಪ್ರತಿನಿಧಿಗಳು ನೀಡಿದ ಭರವಸೆಯಿಂದ ಚುನಾವಣೆ ನೀತಿಸಂಹಿತೆ ಮುಗಿದ ಕೂಡಲೇ ಹಕ್ಕು ಪತ್ರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ತಲತಲಾಂತರಗಳಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡ ಜನರಿಗೆ ನಿರಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.