ADVERTISEMENT

ಚಿಕ್ಕಮಗಳೂರು: ಹಣ್ಣಿನ ನಡುವೆ ಅರಳಿದ ಕಾಫಿ ಹೂವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:26 IST
Last Updated 26 ಜನವರಿ 2026, 7:26 IST
ಹೂವು ಅರಳಿರುವ ಕಾಫಿ ಗಿಡದಲ್ಲಿ ಹಣ್ಣು ಹುಡುಕಿ ಕೊಯ್ಲು ಮಾಡುತ್ತಿರುವ ಬೆಳೆಗಾರರು
ಹೂವು ಅರಳಿರುವ ಕಾಫಿ ಗಿಡದಲ್ಲಿ ಹಣ್ಣು ಹುಡುಕಿ ಕೊಯ್ಲು ಮಾಡುತ್ತಿರುವ ಬೆಳೆಗಾರರು   

ಚಿಕ್ಕಮಗಳೂರು: ಹತ್ತು ದಿನಗಳ ಹಿಂದೆ ಸುರಿದ ಮಳೆಯಿಂದ ಕಾಫಿ ಹೂವುಗಳು ಅರಳಿದ್ದು, ಇದು ಬೆಳೆಗಾರರ ಬದುಕನ್ನು ಮಂಕಾಗಿಸಿದೆ.

ಕಾಫಿ ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಹೂವು ಅರಳಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಈಗ ಹೂವು ಅರಳಿದರೆ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ. ಶೇ 50ರಷ್ಟು ಇಳುವರಿ ಕಡಿಮೆಯಾಗಲಿದೆ ಎಂಬುದು ರೈತರ ಆತಂಕವಾಗಿದೆ. 

ಯುಗಾದಿ ನಂತರ ಬರುವ ರೋಹಿಣಿ ಮಳೆಯನ್ನು ಹೂವಿನ ಮಳೆ ಎಂದು ಕಾಫಿ ಬೆಳೆಗಾರರು ಕರೆಯುತ್ತಾರೆ. ಆದರೆ, ಈ ವರ್ಷ ಜನವರಿಯಲ್ಲಿ ಸುರಿದ ಮಳೆಯಿಂದಾಗಿ ಯಾವುದೇ ಕಾಫಿ ತೋಟಕ್ಕೆ ಹೋದರೂ ಹೂವಿನ ಪರಿಮಳ ಹರಡಿದೆ. ಇನ್ನು ನೀರು ಸಿಗದಿದ್ದರೆ ಈಗ ಅರಳಿರುವ ಹೂವು ಉದುರಿ ಹೋಗಲಿದ್ದು, ಮುಂದಿನ ವರ್ಷದ ಫಸಲು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ರೈತರು ಅಂದಾಜಿಸಿದ್ದಾರೆ.

ADVERTISEMENT

‘ಈ ಮಳೆ ಎರಡು ವರ್ಷಗಳ ಫಸಲನ್ನು ಆಹುತಿ ಪಡೆದಿದೆ‌. ಹಣ್ಣಿನ ಮೇಲೆ ಮಳೆಯಾಗಿದ್ದರಿಂದ ಕಾಫಿ ಹಣ್ಣು ಗಿಡದಲ್ಲಿಯೇ ಒಣಗುತ್ತಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಮಳೆಯಿಂದ ಪೂರ್ಣ ಪ್ರಮಾಣದಲ್ಲಿ ಹೂವಾಗದ ಕಾರಣ ಮುಂದಿನ ಫಸಲಿಗೂ ನಷ್ಟವಾಗಿದೆ’ ಎಂದು ಬೆಳೆಗಾರರು ಹೇಳುತ್ತಾರೆ.

ಈ ಅಕಾಲಿಕ ಮಳೆ ಅರೇಬಿಕಾ ಕಾಫಿಗಿಂತ ರೋಬಾಸ್ಟ ಕಾಫಿಗೆ ಹೆಚ್ಚು ಹಾನಿ ಮಾಡಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.