ADVERTISEMENT

ಸಿಇಟಿ– ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಆರು ಕೇಂದ್ರ: 2,592 ಪರೀಕ್ಷಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:08 IST
Last Updated 23 ಜುಲೈ 2020, 16:08 IST
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್   

ಚಿಕ್ಕಮಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ ಪ್ರವೇಶಕ್ಕೆ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇದೇ 30 ಮತ್ತು 31 ರಂದು ನಡೆಯಲಿದೆ. ಜಿಲ್ಲೆಯಲ್ಲಿ ಆರು ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಿಇಟಿ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಕೋವಿಡ್- 19 ನಿಟ್ಟಿನಲ್ಲಿ ಪರೀಕ್ಷಾ ಕೆಂದ್ರಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 2,592 ಪರೀಕ್ಷಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಪಿಯು ಕಾಲೇಜು, ಎಂಇಎಸ್‌ ಕಾಲೇಜು, ಬಸವನಹಳ್ಳಿಯ ಕಾಲೇಜು, ಮೌಂಟೆನ್‌ ವ್ಯೂ ಕಾಲೇಜು ಹಾಗೂ ಕಡೂರಿನ ಬಾಲಕಿಯರ ಪಿಯು ಕಾಲೇಜು, ಬಾಲಕರ ಪಿಯು ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ. ಕೊಠಡಿಗೆ ತಲಾ 24 ಪರೀಕ್ಷಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಕೊಠಡಿಗಳನ್ನು ಸ್ವಚ್ಛಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕ್ರಮ ವಹಿಸಲಾಗಿದೆ ಎಂದರು.

ADVERTISEMENT

ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಬಳಿಕ ಪರೀಕ್ಷಾರ್ಥಿಗಳನ್ನು ಕೊಠಡಿಗಳಿಗೆ ಕಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ಕೇಂದ್ರದಲ್ಲೂ ಒಂದು ಪ್ರತ್ಯೇಕ ಹೆಚ್ಚುವರಿ ಕೊಠಡಿ ನಿಗದಿ ಪಡಿಸಲಾಗಿದೆ. ಲಕ್ಷಣಗಳಿರುವ, ಪಾಸಿಟಿವ್ ಪ್ರಕರಣಗಳು ಹಾಗೂ ನಿಯಂತ್ರಿತ ವಲಯಗಳಿಂದ ಬರುವ ಪರೀಕ್ಷಾರ್ಥಿಗಳು ನಗರದ ಮಧುವನ ಬಡಾವಣೆಯ ಕೆಎಸ್‌ಒಯು ಪ್ರಾದೇಶಿಕ ಕಚೇರಿ ಕಟ್ಟಡದಲ್ಲಿ (ಹಾಲಿ ಕೋವಿಡ್‌ ನಿಗಾ ಘಟಕ) ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ಪರೀಕ್ಷಾರ್ಥಿಗಳು ಕೇಂದ್ರಗಳಿಗೆ ತಲುಪುವುದಕ್ಕೆ ತಾಲ್ಲೂಕು ಕೇಂದ್ರಗಳಿಂದ ಕೆಎಸ್‌ಆರ್‌ಟಿಸಿ ಬಸ್‌, ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತಹಶೀಲ್ದಾರ್‌ಗಳಾದ ಡಾ.ಕೆ.ಜೆ. ಕಾಂತರಾಜ್, ಜೆ. ಉಮೇಶ್‌ಕುಮಾರ್, ಡಿಡಿಪಿಯು ನಾಗರಾಜ್, ಜಿಲ್ಲಾ ಆರೋಗ್ಯಾದಧಿಕಾರಿ ಡಾ. ಉಮೇಶ್, ಬಿಇಒ ಮಂಜುನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ಟಿ.ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.