ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹದಗೆಟ್ಟಿದ್ದ ರಸ್ತೆಗಳು ಮಳೆಯಲ್ಲಿ ಮತ್ತಷ್ಟು ಬಾಯ್ದೆರೆದುಕೊಂಡಿವೆ. ಅದರಲ್ಲೂ ಗ್ರಾಮೀಣ ರಸ್ತೆಗಳಲ್ಲಿ ಸಂಚಾರವೇ ದುಸ್ತರವಾಗಿದೆ.
ಜಿಲ್ಲಾ ಕೇಂದ್ರ ಚಿಕ್ಕಮಗಳೂರು ನಗರದಲ್ಲಿ ರಸ್ತೆಗಳ ಸ್ಥಿತಿ ಹೇಳತೀರದು. ಮಳೆಗಾಲಕ್ಕೂ ಮುನ್ನ ದುರಸ್ತಿ ಮಾಡಿದ್ದ ನಾಯ್ಡು ಬೀದಿಯಲ್ಲಿ ಮತ್ತೆ ಹೊಂಡಗಳು ಉಂಟಾಗಿವೆ.
ಶಂಕರಪುರ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಒಂದು ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿಗೆ ಅಗೆದು ಗುಂಡಿ ಮುಚ್ಚಿದ್ದು, ಅವು ಮಳೆಯ ನಡುವೆ ಚರಂಡಿ ರೂಪ ಪಡೆದುಕೊಂಡಿವೆ. ರಸ್ತೆಯಲ್ಲೇ ಚರಂಡಿಯೊಂದು ನಿರ್ಮಾಣವಾದಂತಾಗಿದ್ದು, ವಾಹನ ಚಾಲಕರು ತಿಣುಕಾಡಬೇಕಿದೆ.
ಬಸವನಹಳ್ಳಿ ವೇಣುಗೋಪಾಲ ದೇವಾಲಯ ರಸ್ತೆ, ಶಂಕರಪುರ– ಬೈಪ್ ಸಂಪರ್ಕ ರಸ್ತೆ, ವಿಜಯಪುರ ಒಕ್ಕಲಿಗರ ಕಲ್ಯಾಣ ಮಂಟಪದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಇದಕ್ಕಿಂತಲೂ ಶೋಚನೀಯವಾಗಿದೆ. ಡಾಂಬರ್ ಕಾಣದ ಹಲವು ರಸ್ತೆಗಳಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಜನರು ಕೆಸರಿನಲ್ಲೇ ಜೀವನ ಸಾಗಿಸುವಂತಾಗಿದೆ.
ಹಲವು ರಸ್ತೆಗಳಿಗೆ ಸಂಪೂರ್ಣ ಹಾನಿ:
ಮಳೆಗಾಲ ಪ್ರಾರಂಭವಾಗುವ ಮೊದಲೇ ಗ್ರಾಮೀಣ ಪ್ರದೇಶದ ರಸ್ತೆಗಳು ಭಾಗಶಃ ಹದಗೆಟ್ಟಿದ್ದವು. ಮಳೆಗಾಲ ಪ್ರಾರಂಭವಾದ ಮೇಲೆ ಸಂಪೂರ್ಣ ಹಾಳಾಗಿವೆ. ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೆ ಬೈಲು ನಂದಿಬಟ್ಟಲು ತಿಗಡ ಕುರ್ಕುಲಮಟ್ಟಿ ಎಸ್ಟೇಟ್ ದೂಪದಖಾನು ಉಡೆವಾ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತರೀಕೆರೆ ಪಟ್ಟಣದ 23 ವಾರ್ಡ್‌ಗಳ ಪೈಕಿ ಉಪ್ಪಾರ ಬಸವನಹಳ್ಳಿ ಹಳಿಯೂರು ಕೋಡಿಕ್ಯಾಂಪ್ ಮತ್ತು ಗಾಳಿಹಳ್ಳಿ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಲಕ್ಕವಳ್ಳಿ ಹೋಬಳಿಯ ಹಳೆ ಲಕ್ಕವಳ್ಳಿ ಕುಂದೂರು ದೊಡ್ಡ ಕುಂದೂರು ಹಲಸೂರು ಗೋಪಾಲ ಕರ್ಕುಚ್ಚಿ ಹೊಸಮನೆ ಬಸವನಹಳ್ಳಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಹೊಂಡಮಯವಾಗಿವೆ. ಅಮೃತಪುರ ಹೋಬಳಿಯ ಎ.ರಾಮನಹಳ್ಳಿ ಬಿ.ರಾಮನಹಳ್ಳಿ ಇಟ್ಟಿಗೆ ಮುಂಡ್ರೆ ಹೊಸಳ್ಳಿ ತಾಂಡ್ಯ ಕುಡ್ಲೂರು ಗ್ರಾಮ ಸಂಪರ್ಕಿಸುವ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ. ವಿದ್ಯಾರ್ಥಿಗಳು ವಯೋವೃದ್ಧರು ಮಹಿಳೆಯರು ಓಡಾಡಲು ಹರಸಾಹಸ ಪಡುವಂತಾಗಿದೆ.
ಕೊಪ್ಪ: ಗುಂಡಿ ಬಿದ್ದ ರಸ್ತೆಗಳು
ಪಟ್ಟಣದ ಮೇಲಿನ ಪೇಟೆಯಲ್ಲಿ ಮುಖ್ಯ ರಸ್ತೆ ಮಾರ್ಕೆಟ್ ರಸ್ತೆಯಲ್ಲಿ ಗುಂಡಿ ಬಿದ್ದು ಜನರಿಗೆ ಓಡಾಡಲು ಸಮಸ್ಯೆಯಾಗುತ್ತಿದೆ. ಗುದುರೆಗುಂಡಿಯಲ್ಲಿ ಮಾವಿನಕಟ್ಟೆ ಸಮೀಪದ ತುಮಕಾನೆ ಬಳಿ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವಂತಿದೆ. ವಾಹನಗಳಿಗೂ ಹಾನಿಯಾಗುತ್ತಿದೆ. ಜಿಲ್ಲಾ ಕೇಂದ್ರ ಸಂಪರ್ಕಿಸುವ ಮಾರ್ಗದ ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ಇತ್ತೀಚೆಗೆ ಗುಂಡಿ ಮುಚ್ಚುವ ಕೆಲಸ ನಡೆದಿದ್ದರೂ ಮತ್ತೆ ಗುಂಡಿ ಉಂಟಾಗಿದೆ.
ನರಸಿಂಹರಾಜಪುರ: ಮುಖ್ಯ ರಸ್ತೆಗಳಲ್ಲಿ ಸಂಚಾರ ಪ್ರಯಾಸ
ತಾಲ್ಲೂಕಿನಿಂದ ಪ್ರಮುಖ ಪಟ್ಟಣ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಹುತೇಕ ಕಡೆ ಹದಗೆಟ್ಟಿದ್ದು ಸಂಚಾರ ಮಾಡುವುದೇ ಪ್ರಯಾಸಕರವಾಗಿದೆ. ತಾಲ್ಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಶೆಟ್ಟಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಗುಂಡಿಗಳು ಬಿದ್ದಿವೆ. ಮಡಬೂರು ಗ್ರಾಮದ ಸೇತುವೆ ಸಮೀಪ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೆಸ್ಕಾಂನ ನೂತನ ಕಚೇರಿ ಮುಂಭಾಗದ ರಸ್ತೆ ಚರ್ಚ್ ಸಮೀಪದ ರಸ್ತೆಯಲ್ಲಿ ಭಾರಿ ಗುಂಡಿಗಳು ಬಿದ್ದಿವೆ. ಗ್ರಾಮದ ಸಂಜೀವಿನಿ ಶಾಲೆಯ ಮುಂಭಾಗದಲ್ಲಿ ಹಾದು ಹೋಗುವ ಮುಖ್ಯ ರಸ್ತೆಯ ತುಂಬಾ ಗುಂಡಿಗಳೇ ಇವೆ. ಕೊರಲು ಕೊಪ್ಪ ಗ್ರಾಮದ ಸಮೀಪದ ರಸ್ತೆ ಹದಗೆಟ್ಟು ಹೋಗಿದೆ. ಪಟ್ಟಣದ ಮಿನಿವಿಧಾನ ಸೌಧದ ಸಮೀಪದಿಂದ ಹಾದು ಹೋಗುವ ಬೈಪಾಸ್ ರಸ್ತೆಯಲ್ಲಿ ಬಹುತೇಕ ಕಡೆ ಗುಂಡಿ ಬಿದ್ದಿದ್ದು ಸಂಚರಿಸುವುದು ಕಷ್ಟವಾಗಿದೆ. ಕೊಪ್ಪ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದ್ದು ಕುದುರೆಗುಂಡಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಗುಂಡಿಮಯಾಗಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ಕಾರು ಬೈಕ್ ಲಾರಿ ಬಸ್ ಮೊದಲಾದ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಪ್ರಯಾಸದಿಂದಲೇ ಓಡಾಡುವಂತಾಗಿದೆ. ಸರ್ಕಾರ ಯಾವುದೇ ಸೌಲಭ್ಯ ನೀಡದಿದ್ದರೂ ಸಮಸ್ಯೆಯಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿಪಡಿಸಿ ಸಂಚಾರಕ್ಕೆ ಅವಕಾಶ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ.
ಕಳಸ: ಅತಿಯಾದ ಮಳೆ ; ಹದಗೆಟ್ಟ ರಸ್ತೆ
ತಾಲ್ಲೂಕಿನ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳೆಲ್ಲವೂ ಅತಿಯಾದ ಮಳೆಯಿಂದ ಹದಗೆಟ್ಟಿವೆ. ಕಳಸ-ಕೊಟ್ಟಿಗೆಹಾರ ಕಳಸ–ಕುದುರೆಮುಖ ಕಳಸ- ಬಾಳೆಹೊನ್ನೂರು ಕಳಸ–ಹೊರನಾಡು ಪ್ರಮುಖ ರಸ್ತೆಗಳ ಜೊತೆಗೆ ಹಿರೇಬೈಲು–ಹೆಮ್ಮಕ್ಕಿಕಳಸ–ಕಲಕೋಡು ಹೊರನಾಡು–ಬಲಿಗೆ ರಸ್ತೆಗಳು ಹೊಂಡಮಯವಾಗಿವೆ. ಬಹುತೇಕ ಗ್ರಾಮೀಣ ರಸ್ತೆಗಳು ದುರಸ್ತಿಯಾಗಬೇಕಿದೆ. ಸೀಮಿತ ಅನುದಾನದಲ್ಲಿ ಯಾವ ರಸ್ತೆ ದುರಸ್ತಿ ಮಾಡುವುದು ಎಂಬ ಗೊಂದಲ ಸ್ಥಳೀಯ ಅಡಳಿತ ಮತ್ತು ಜನಪ್ರತಿನಿಧಿಗಳಲ್ಲಿ ಶುರುವಾಗಿದೆ.
ಮೂಡಿಗೆರೆ: ಗ್ರಾಮೀಣ ರಸ್ತೆ ಗುಂಡಿಮಯ
ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಗುಂಡಿಯವಾಗಿದ್ದು ವಾಹನ ಸವಾರರು ಗ್ರಾಮೀಣ ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ತಾಲ್ಲೂಕಿನ ಬಸ್ಕಲ್ –ಹಾಂದಿ ರಸ್ತೆ ಸಾರಗೋಡು– ಕೂವೆ ರಸ್ತೆ ಕುಂದೂರು– ಆಲ್ದೂರು ಲಿಂಕ್ ರಸ್ತೆ ಸೇರಿದಂತೆ ಹಲವು ಹ್ರಾಮೀಣ ರಸ್ತೆಗಳಲ್ಲಿ ಮಾರುದ್ದ ಗುಂಡಿ ಬಿದ್ದಿವೆ. ವಾಹನ ಸವಾರರು ವಿದ್ಯಾರ್ಥಿಗಳು ಗ್ರಾಮೀಣ ಜನರು ಗುಂಡಿ ಬಿದ್ದ ರಸ್ತೆಯಲ್ಲಿ ಓಡಾಡಲು ಸಂಕಷ್ಟ ಎದುರಿಸುವಂತಾಗಿದೆ.
ಕಡೂರು: ಡಾಂಬರ್ ಕಾಣದ ರಸ್ತೆಗಳು
ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಇದುವರೆಗೆ ಡಾಂಬರೀಕರಣಗೊಂಡಿಲ್ಲ. ಹಿರೇನಲ್ಲೂರು ರಸ್ತೆಯಿಂದ ಚೌಡ್ಲಾಪುರ ಸಂಪರ್ಕಿಸುವ ಮಾರ್ಗ ಬೀರೂರಿನಿಂದ ಮದಗದ ಕೆರೆ ಸಂಪರ್ಕಿಸುವ ರಸ್ತೆ ಕಡೂರು ಪಕ್ಕದಲ್ಲಿನ ತಂಗಲಿ ರಸ್ತೆ ಬೀರೂರು ಸಮೀಪದ ಬಿ.ಕೆ.ಹೊಸೂರು ರಸ್ತೆ ಗಾಳಿಹಳ್ಳಿ ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳಿಗೆ ಕಾಯಕಲ್ಪ ದೊರಕಬೇಕಿದೆ. ಜಿಲ್ಲಾ ರಸ್ತೆಗಳು ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಂಡಿದ್ದರೂ ಒಳಭಾಗದ ಹಲವು ಗ್ರಾಮೀಣ ರಸ್ತೆಗಳ ಮೂಲಕ ಹಳ್ಳಿಗಳನ್ನು ತಲುಪಲು ಜನ ಸಂಕಷ್ಟ ಪಡಬೇಕಾದ ಸ್ಥಿತಿ ಇದೆ. ಹಲವು ರಸ್ತೆಗಳು ಮಳೆಗಾಲದಲ್ಲಿ ಸಂಚರಿಸಲು ಯೋಗ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.