ADVERTISEMENT

ಚಿಕ್ಕಮಗಳೂರು | ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 8:18 IST
Last Updated 5 ಜನವರಿ 2025, 8:18 IST
<div class="paragraphs"><p>ನಕ್ಸಲರು (ಪ್ರಾತಿನಿಧಿಕ ಚಿತ್ರ)</p></div>

ನಕ್ಸಲರು (ಪ್ರಾತಿನಿಧಿಕ ಚಿತ್ರ)

   

ಚಿಕ್ಕಮಗಳೂರು: ಕಾಡಿನಲ್ಲಿ ಉಳಿದಿರುವ ನಕ್ಸಲರನ್ನು ಮರಳಿ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಡಗಾರು ಲತಾ ಸೇರಿ ಆರು ಜನ ಶೀಘ್ರವೇ ಮುಖ್ಯವಾಹಿನಿಗೆ ಬರಲಿದ್ದಾರೆ.

ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಖ್ಯ ವಾಹಿನಿಗೆ ಬರಲು ಒಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಪ್ತಚರ ಇಲಾಖೆ ಅಧಿಕಾರಿಗಳ ಜತೆ ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು  ಮೇಲಿಂದ ಮೇಲೆ ಸಭೆಗಳನ್ನು ನಡೆಸಿವೆ. ಒಂದೆರಡು ದಿನಗಳಲ್ಲೇ ನಕ್ಸಲರು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ. 

ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಗಳು ಘನತೆಯುತವಾಗಿ ನಡೆಯಬೇಕು. ಅವರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು. ಹೋರಾಟದ ಮಾರ್ಗ ಬದಲಿಸಿ ಪ್ರಜಾತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ತಡೆಯಾಗಬಾರದು ಎಂಬ ಮನವಿಯನ್ನು ಸರ್ಕಾರವೂ ಒಪ್ಪಿದೆ.

ಮುಖ್ಯವಾಹಿನಿಗೆ ಬಂದ ಬಳಿಕ ಜೈಲಿನಲ್ಲಿ ಕೊಳೆಯುವ ಸ್ಥಿತಿ ಇರಬಾರದು. ಸಂಬಂಧ ಇಲ್ಲದಿದ್ದರೂ ಹಲವು ಪ್ರಕರಣಗಳಲ್ಲಿ ಅವರ ಹೆಸರು ಸೇರ್ಪಡೆಯಾಗಿದ್ದು, ಅವುಗಳಿಂದ ಮುಕ್ತಿ ಸಿಗಬೇಕು. ಮುಖ್ಯವಾಹಿನಿಗೆ ಬಂದ ಬಳಿಕ ಬೇಗನೆ ಜಾಮೀನಿನ ಮೇಲೆ ಹೊರಗೆ ಬರಲು ಸಹಕರಿಸಬೇಕು ಎಂಬ ಮನವಿಗೂ ಸರ್ಕಾರ ಸ್ಪಂದಿಸಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸುವ ಭರವಸೆಯನ್ನೂ ನೀಡಿದೆ ಎಂದೂ ಮೂಲಗಳು ಹೇಳಿವೆ.

ಎಲ್ಲಾ ಮೊಕದ್ದಮೆಗಳನ್ನು ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಸಹಕಾರ ನೀಡಲಾಗುವುದು. ಪ್ರವರ್ಗ –ಎ ವರ್ಗಕ್ಕೆ ಸೇರಿದವರಿಗೆ ₹7.50 ಲಕ್ಷ, ಪ್ರವರ್ಗ –ಬಿ ವರ್ಗಕ್ಕೆ ₹4 ಲಕ್ಷ ಆರ್ಥಿಕ ನೆರವನ್ನು ಮೂರು ಹಂತಗಳಲ್ಲಿ ನೀಡಲಾಗುವುದು. ಕೌಶಲ ತರಬೇತಿ ನೀಡಲಾಗುವುದು. ಕೇರಳ, ಕರ್ನಾಟಕ, ತಮಿಳುನಾಡು ಸೇರಿ ಎಲ್ಲಾ ಸರ್ಕಾರಗಳೂ ನಕ್ಸಲರ ಬಗ್ಗೆ ಅನುಕಂಪದಿಂದಲೇ ವರ್ತಿಸುತ್ತವೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

ಈ ಕುರಿತು ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್.ಅಶೋಕ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಮುಖ್ಯವಾಹಿನಿಗೆ ಬರಲು ಬಯಸುತ್ತಿರುವ ನಕ್ಸಲರ ಬೇಡಿಕೆಗಳು ಸರಿಯಾಗಿವೆ. ಸರ್ಕಾರ ಅವುಗಳನ್ನು ಪರಿಗಣಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ಮುಖ್ಯವಾಹಿನಿಗೆ ಬರುವವರು ಯಾರು

  • ಮುಂಡಗಾರು ಲತಾ

  • ಸುಂದರಿ ಕುತ್ಲೂರು

  • ವನಜಾಕ್ಷಿ ಬಾಳೆಹೊಳೆ

  • ಮಾರೆಪ್ಪ ಅರೋಲಿ

  • ಕೆ.ವಸಂತ

  • ಟಿ.ಎನ್.ಜೀಶ್

ಎಂಟು ನಕ್ಸಲರ ಪೈಕಿ ಒಬ್ಬರಷ್ಟೇ ಬಾಕಿ

ಕೇರಳ, ತಮಿಳುನಾಡು ಮತ್ತು ಕರ್ನಾಟಕ ಭಾಗದಲ್ಲಿ ಎಂಟು ನಕ್ಸಲರಿದ್ದರು. ವಿಕ್ರಂಗೌಡ ಎನ್‌ಕೌಂಟರ್ ಬಳಿಕ ಏಳು ಮಂದಿ ಉಳಿದಂತಾಗಿತ್ತು. 

ಈ ಪೈಕಿ ಜಯಣ್ಣ ಆಲಿಯಾಸ್ ಜಾನ್ ಮಾತ್ರ ಸಂಪರ್ಕಕ್ಕೆ ಸಿಕ್ಕಿಲ್ಲ. ವಿಕ್ರಂಗೌಡ ಎನ್‌ಕೌಂಟರ್‌ಗೂ ಮುನ್ನವೇ ಈ ತಂಡದಿಂದ ಬೇರ್ಪಟ್ಟಿದ್ದರು. ಅವರನ್ನೂ ಹುಡುಕುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ನಕ್ಸಲರ ಬೇಡಿಕೆಗಳೇನು?

  • ಭೂಮಿ ಇಲ್ಲದ ಕುಟುಂಬಕ್ಕೆ ಐದು ಎಕರೆ ಕೃಷಿ ಭೂಮಿ ನೀಡಬೇಕು, ಶಾಶ್ವತ ಹಕ್ಕುಪತ್ರ ನೀಡಬೇಕು.

  • ಎಲ್ಲಾ ಆದಿವಾಸಿ ಕುಟುಂಬಗಳಿಗೆ ಭೂಮಿ ಮತ್ತು ವಸತಿ ನೀಡಬೇಕು.

  • ಕೃಷಿ ಯೋಗ್ಯ ಪಾಳುಭೂಮಿಯನ್ನು ಭೂಹೀನರಿಗೆ ಹಂಚಬೇಕು.

  • ಆಹಾರದ ಬೆಳೆ, ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ಅವರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಬೇಕು. 

  • ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು.

  • ಹೈಟೆಕ್ ಟೂರಿಸಂ ನಿಲ್ಲಸಿ ಪರಿಸರ ರಕ್ಷಿಸಬೇಕು.

  • ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರ ಇರಬೇಕು

  • ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಬೇಕು.

  • ನಿರುದ್ಯೋಗಿಗಳಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಕೊಡಬೇಕು.

  • ಸಾಂಸ್ಕೃತಿಕ ಬದಲಾವಣೆಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.

  • ಹವಾಮಾನ ಬದಲಾವಣೆಯಿಂದ ಕೃಷಿ ಬೆಳೆ, ಮನುಷ್ಯನ ಬದುಕು ಮತ್ತು ಪ್ರಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕು.

  • ಮೂರು ರಾಜ್ಯಗಳಲ್ಲಿ (ಕರ್ನಾಟಕ, ತಮಿಳುನಾಡು, ಕೇರಳ) ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು.

  • ರೈತರ ಒತ್ತುವರಿ ಭೂಮಿ ತೆರವುಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.

ಹಾಗಲಗಂಜಿ ವೆಂಕಟೇಶ್, ಮಲ್ಲಿಕಾ(ಕವಿತಾ), ಕೋಮಲಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನಿಲಗುಳಿ ಪದ್ಮನಾಭ್, ಭಾರತಿ(ರೇಣುಕಾ), ರಿಜ್ವಾನಾ ಬೇಗಂ(ಕಾವೇರಿ), ಕನ್ಯಕುಮಾರಿ, ಶಿವು, ಚನ್ನಮ್ಮ(ಸುಮಾ), ಪರಶುರಾಮ್. ಈ ಹಿಂದೆ ಮುಖ್ಯ ವಾಹಿನಿಗೆ ಬಂದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.