ADVERTISEMENT

ಚಿಕ್ಕಮಗಳೂರು: ಸೆ.3ಕ್ಕೆ ಶಿಕ್ಷಕರಿಂದ ಫ್ರೀಡಂ ಪಾರ್ಕ್ ಚಲೊ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:12 IST
Last Updated 13 ಆಗಸ್ಟ್ 2025, 4:12 IST
ಕಿರಣಕುಮಾರ್
ಕಿರಣಕುಮಾರ್   

ಚಿಕ್ಕಮಗಳೂರು: ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಸೆ. 3ರಂದು ಫ್ರೀಡಂ ಪಾರ್ಕ್ ಚಲೊ ಹೋರಾಟ ನಡೆಸಲಾಗುವುದು ಎಂದು ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಮಟ್ಟದ ಹೋರಾಟಕ್ಕೆ ನಿರ್ಧರಿಸಿದೆ. 2017 ರವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ನೇ ತರಗತಿಗೆ ಶಿಕ್ಷಕರೆಂದು ಪರಿಗಣಿಸಬೇಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆಗ್ರಹಿಸಿದರು.

‘ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆ ಜತೆಗೆ ಪದನಾಮೀಕರಿಸಬೇಕು. ಬೇಡಿಕೆ ಈಡೇರಿಕೆಗಾಗಿ ಹೋರಾಟ ರೂಪಿಸಲಾಗಿದೆ. ಆ. 25ರೊಳಗೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು. ಆ. 26ರಂದು ಸರ್ಕಾರಕ್ಕೆ ಮತ್ತು ಇಲಾಖೆಗೆ ಹೋರಾಟ ಕುರಿತು ಪತ್ರ ರವಾನಿಸುವುದು. ಆ. 27ರೊಳಗಾಗಿ ಬೇಡಿಕೆ ಈಡೇರದಿದ್ದಲ್ಲಿ, ಸೆ. 3ರಂದು ರಾಜ್ಯದ ಶಿಕ್ಷಕರ ಜತೆಗೂಡಿ ಎಲ್ಲಾ ಶಿಕ್ಷಕರು ಸಾಂದರ್ಭಿಕ ರಜೆ ಹಾಕಿ ಫ್ರೀಡಂ ಪಾರ್ಕ್ ಚಲೊದಲ್ಲಿ ಭಾಗವಹಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಅಂದು ಕೂಡ ಸರ್ಕಾರದಿಂದ ಯಾವುದೇ ನಿರ್ಣಯ ಬರದಿದ್ದಲ್ಲಿ ಸೆ. 4 ಮತ್ತು 5ರಂದು ಅಹೋರಾತ್ರಿ ಧರಣಿ ನಡೆಸಲಾಗುವುದು. ಹೋರಾಟದ ಭಾಗವಾಗಿ ಫ್ರೀಡಂ ಪಾರ್ಕ್‌ನಲ್ಲಿಯೇ ಎಲ್ಲಾ ಪದಾಧಿಕಾರಿಗಳ, ಪ್ರತಿನಿಧಿಗಳ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುವುದು. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಸಂಘದ ಸದಸ್ಯರಾದ ಮಂಜುನಾಥ, ಹರೀಶ್, ಬೈರೇಗೌಡ್ರು, ಬಸಪ್ಪ, ಪುಟ್ಟಸ್ವಾಮಿ, ಶ್ರೀನಿವಾಸ್, ನವೀನ್, ಧರಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.