ಮೂಡಿಗೆರೆ ತಾಲ್ಲೂಕಿನ ರಾಣಿಝರಿ ಪ್ರವಾಸಿ ತಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿರುವುದು
–ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರು: ರಮಣೀಯ ಪ್ರಕೃತಿ ತಾಣಗಳು, ದಟ್ಟ ಕಾನನದ ಸಾಲುಗಳು, ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರ ಬೀಡಾದ ಕಾಫಿ ನಾಡಿಗೆ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ಹೆಚ್ಚು. ಪ್ರವಾಸಿ ತಾಣಗಳು ಮೂಲಸೌಕರ್ಯಗಳಿಂದ ನಲುಗುತ್ತಿವೆ.
ಕಾರ್ಪೋರೇಟ್ ಸಂಸ್ಕೃತಿ, ಹಲವು ಜಂಜಾಟದ ನಡುವೆ ನಲುಗಿ ಹೋಗಿರುವ ಜನ, ಕೊಂಚ ನಿರಾಳ ಬದುಕು ಅರಸಿ ಮಲೆನಾಡುಗಳತ್ತ ದಾಂಗುಡಿ ಇಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ, ತಿಂಗಳಿನಿಂದ ತಿಂಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.
ಪ್ರವಾಸೋದ್ಯಮ ಇಲಾಖೆ ಶೃಂಗೇರಿ, ಹೊರನಾಡು, ಕಳಸ, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣುಗುಂಡಿ ಗಿರಿಧಾಮಗಳಿಗೆ ಬರುವ ಪ್ರವಾಸಿಗರ ಲೆಕ್ಕವನ್ನು ಮಾತ್ರ ಇಟ್ಟುಕೊಂಡಿದೆ. ಆದರೆ, ಜಿಲ್ಲೆಯಲ್ಲಿ ಕ್ಷೇತ್ರಗಳಷ್ಟೇ ಪ್ರವಾಸಿ ತಾಣವಾಗಿ ಉಳಿದಿಲ್ಲ. ರಾಣಿಝರಿ, ಕುದುರೆಮುಖ, ದೇವರಮನೆ, ಎತ್ತಿನಭುಜ ಸೇರಿ ಹಲವು ಪ್ರವಾಸಿ ತಾಣಗಳಿವೆ.
ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಸೀತಾಳಯ್ಯನಗಿರಿ, ಗಿರಿಶ್ರೇಣಿಯ ಮಾಣಿಕ್ಯಧಾರಾ, ಹೊನ್ನಮ್ಮನ ಹಳ್ಳ, ಹಿರೇಕೊಳಲೆ ಕೆರೆ, ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇಗುಲ, ಮಲ್ಲೇನಹಳ್ಳಿ ಬಿಂಡಿಗದ ದೇವಿರಮ್ಮ ದೇಗುಲ, ಖಾಂಡ್ಯಾದ ಮಾರ್ಕಂಡೇಶ್ಚರ ದೇಗುಲ, ಅಂಬಳೆ ಮೊದಲಾದ ಪ್ರವಾಸಿ ತಾಣಗಳು ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ಇವೆ. ಇಲ್ಲಿಗೆ ಪ್ರವಾಸಿಗರು ನಿರಾಯಾಸವಾಗಿ ಹೋಗಿ ಬರುವ ಸೌಕರ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.
ವಾರಾಂತ್ಯದಲ್ಲಿ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿಗೆ ಹೋಗುವ ಪ್ರವಾಸಿಗರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ನರಳುವುದು ಸಾಮಾನ್ಯ. ಈ ದಟ್ಟಣೆ ನಿಯಂತ್ರಿಸಲು ಗಿರಿಯ ತಳಭಾಗದಲ್ಲೇ ವಾಹನ ನಿಲುಗಡೆ ತಾಣ ನಿರ್ಮಿಸುವ ಪ್ರಸ್ತಾಪ ಹಾಗೇ ಉಳಿದಿದೆ. ಎರಡು ಮೂರು ಕಡೆ ಜಾಗ ಗುರುತಿಸಿದ್ದ ಜಿಲ್ಲಾಡಳಿತ, ಅಂತಿಮ ತೀರ್ಮಾನ ಕೈಗೊಂಡಿಲ್ಲ. ಗಿರಿಯ ಮೇಲ್ಭಾಗಕ್ಕೆ ತೆರಳಲು ಆನ್‌ಲೈನ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಜಾರಿಗೆ ಬಂದಿಲ್ಲ. ಇದರಿಂದಾಗಿ ಸಂಚಾರ ದಟ್ಟಣೆಯಲ್ಲಿ ಪ್ರವಾಸಿಗರು ಸಿಲುಕುವುದು ಸಾಮಾನ್ಯವಾಗಿದೆ.
ಕೆಮ್ಮಣ್ಣುಗುಂಡಿ ಪ್ರಯಾಣ ತಿಣುಕಾಟ
ತರೀಕೆರೆ: ತಾಲೂಕಿನಲ್ಲಿ ವಿಶೇಷವಾಗಿ ಕರ್ನಾಟಕದ ಊಟಿ ಎಂದೇ ಪ್ರಸಿದ್ಧವಾಗಿರುವ ಕೆಮ್ಮಣ್ಣುಗುಂಡಿಯ ಕೃಷ್ಣ ರಾಜೇಂದ್ರ ಗಿರಿಧಾಮ ಬಹಳ ಪ್ರಮುಖವಾಗಿದೆ. ಇದರ ಸಮೀಪವಿರುವ ಹೆಬ್ಬೆ ಜಲಪಾತ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣ. ಈ ಪ್ರದೇಶಗಳಿಗೆ ಹೋಗುವ ಮೊದಲೇ ದೊರೆಯುವುದು ಕಲ್ಲತ್ತಿಗಿರಿ ಜಲಪಾತ. ಈ ಜಲಪಾತದೊಂದಿಗೆ ಪ್ರಮುಖ ಧಾರ್ಮಿಕ ಕ್ಷೇತ್ರವು ಆಗಿದೆ. ಈ ಪ್ರದೇಶಗಳಿಗೆ ಬರುವ ಪ್ರವಾಸಿಗರು ತಮ್ಮ ವಾಹನಗಳಲ್ಲೇ ಬರಬೇಕಾಗುತ್ತದೆ. ಪ್ರವಾಸಿಗರ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು ಮೊದಲೇ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ಸ್ಥಳಾವಕಾಶ ಇಲ್ಲ. ಪ್ರವಾಸಿಗರ ವಿಶ್ರಾಂತಿಗೆ ತಂಗುದಾಣಗಳಿಲ್ಲ. ಕೆಮ್ಮಣ್ಣುಗುಂಡಿ ರಸ್ತೆಯಂತೂ ಹೆಬ್ಬೆ ಜಲಪಾತದ ಚೆಕ್‌ಪೋಸ್ಟ್‌ನಿಂದ ಮುಂದಕ್ಕೆ ಸಂಪೂರ್ಣ ಹಾಳಾಗಿದೆ. ಬರುವ ವಾಹನಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲ. ಇದರಿಂದ ಪ್ರವಾಸಿಗರು ಗಿರಿಧಾಮ ತಲುಪಲು ಪರದಾಡಬೇಕಾದ ಸ್ಥಿತಿ ಇದೆ.
ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು
ಮೂಡಿಗೆರೆ: ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೇ ರಸ್ತೆ ಬದಿಯಲ್ಲೇ ನಿಲುಗಡೆಗೊಳಿಸಲಾಗುತ್ತಿದೆ. ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ದೇವರಮನೆ ಭೈರಾಪುರ ರಾಣಿಝರಿ ಪ್ರಮುಖವಾಗಿದ್ದು ರಾಣಿಝರಿಯನ್ನು ಹೊರತು ಪಡಿಸಿ ಉಳಿದೆಲ್ಲಾ ತಾಣಗಳಲ್ಲೂ ವಾಹನ ನಿಲುಗಡೆಗೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ರಸ್ತೆ ಬದಿಯಲ್ಲೇ ವಾಹನ ನಿಲುಗಡೆಗೊಳಿಸುತ್ತಿದ್ದಾರೆ. ಪ್ರವಾಸಿಗರ ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುವುದರಿಂದ ಸ್ಥಳೀಯರು ಸಂಚರಿಸಲು ಅಡ್ಡಿಯಾಗುತ್ತಿದ್ದು ಪದೇ ಪದೇ ವಾಗ್ವಾದಗಳು ಕೂಡ ನಡೆಯುತ್ತಿವೆ. ದೇವರಮನೆಗೆ ಬರುವ ವಾಹನಗಳು ದೇವಾಲಯದ ಬಳಿಗೆ ಬರದೇ ಗ್ರಾಮದ ಬೆಟ್ಟದ ತಪ್ಪಲಿನಲ್ಲಿಯೇ ನಿಲುಗಡೆ ಮಾಡುತ್ತಾರೆ. ಚಾರ್ಮಾಡಿ ಘಾಟಿಯಲ್ಲಿ ಅಣ್ಣಪ್ಪಸ್ವಾಮಿ ದೇವಾಲಯದಿಂದ ಕೆಳಭಾಗದಲ್ಲಿ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ ಪ್ರಪಾತ ವೀಕ್ಷಣೆ ಮಾಡಲಾಗುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ‘ಪ್ರವಾಸಿ ವಾಹನಗಳಿಗೆ ಸ್ಥಳೀಯವಾಗಿ ಶುಲ್ಕ ವಿಧಿಸುತ್ತಾರಾದರೂ ಸರ್ಕಾರ ವಾಹನ ನಿಲುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಾರಾಂತ್ಯದಲ್ಲಿ ಬರುವ ನೂರಾರು ವಾಹನಗಳು ರಸ್ತೆ ಬದಿಯೇ ನಿಲ್ಲುವುದರಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಸ್ಥಳೀಯ ಹೋಂಸ್ಟೆ ವಾಹನ ಚಾಲಕ ಸುರೇಶ್.
ಕ್ಯಾತನಮಕ್ಕಿ ತಲುಪುವುದೇ ಸಾಹಸ
ಕಳಸ: ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ತಾಣಗಳು ಇದ್ದರೂ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿವೆ ಪ್ರವಾಸಿಗರ ನೆಚ್ಚಿನ ಕ್ಯಾತನಮಕ್ಕಿ ತಲುಪುವ ರಸ್ತೆ ಸ್ಥಿತಿ ಅಧೋಗತಿಯಾಗಿದೆ. ಸುರುಮನೆ ಜಲಪಾತ ರಸ್ತೆ ಕೂಡ ಶಿಥಿಲವಾಗಿದೆ. ಪ್ರವಾಸಿಗರಿಗೆ ಇಡೀ ತಾಲ್ಲೂಕಿನಲ್ಲಿ ಮಾಹಿತಿ ಕೇಂದ್ರ ಇಲ್ಲ. ಕುದುರೆಮುಖ ಮತ್ತು ನೇತ್ರಾವತಿ ಚಾರಣಕ್ಕೆ ನೂರಾರು ಜನ ಬರುತ್ತಾರೆ. ಅವರ ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಅಂಬಾತೀರ್ಥ ನೋಡಲು ಹೋದವರು ಜೀವ ಕೈಯಲ್ಲಿ ಹಿಡಿದು ವಾಪಸ್ ಬರಬೇಕಾಗುತ್ತದೆ.ತುಕ್ಕು ಹಿಡಿದ ತೂಗುಸೇತುವೆಗಳು ಕೂಡ ಅಪಾಯಕ್ಕೆ ಅಹ್ವಾನ ಕೊಡುತ್ತವೆ. ಒಟ್ಟಾರೆ ರಮಣೀಯ ತಾಣಗಳು ಇದ್ದರೂ ಮೂಲ ಸೌಕರ್ಯ ಇಲ್ಲದಿರುವುದು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ರಾಣಿಝರಿಗೆ ರಸ್ತೆಯೇ ಸವಾಲು
ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಿಲ್ಲೆಯ ಪ್ರಕೃತಿ ತಾಣಗಳಲ್ಲಿ ರಾಣಿ ಝರಿ ಕೂಡ ಒಂದು. ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲಿ ಈ ತಾಣಕ್ಕೆ ತೆರಳಲು ಜನ ಹರಸಾಹಸ ಪಡುತ್ತಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಣಿಝರಿ ಪ್ರವಾಸಿ ತಾಣ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ರೇಖೆಯಂತಿದೆ. ಗುಡ್ಡದ ಮೇಲಿಂದ ಮೂರೂವರೆ ಸಾವಿರ ಅಡಿಯ ಪ್ರಪಾತ ನೋಡಲು ನಿತ್ಯ ಪ್ರವಾಸಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದ್ದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕಾರುಗಳು ಮಿನಿ ಬಸ್‌ಗಳು ಹೋಗುವ ಸ್ಥಿತಿಯಲ್ಲಿ ರಸ್ತೆ ಇಲ್ಲವಾಗಿದೆ. ಮೂರು–ನಾಲ್ಕು ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಜೀಪ್‌ಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಇದೆ. ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇರುವ ಜಾಗದಿಂದ ಹತ್ತಿರದಲ್ಲೇ ರಾಣಿಝರಿ ಇದೆ. ಅಲ್ಲಿಂದ ಬಲ್ಲಾಳರಾಯನ ದುರ್ಗ ಬಂಡಾಜೆ ಜಲಪಾತ ವೀಕ್ಷಣೆಗೆ ಜನ ಚಾರಣ ತೆರಳುತ್ತಾರೆ. ಅರಣ್ಯ ಇಲಾಖೆ ಚೆಕ್‌ಪೋಸ್ಟ್ ತನಕ ಇದ್ದ ರಸ್ತೆಯನ್ನಾದರೂ ಸರಿಪಡಿಸಬೇಕು ಎಂಬುದು ಪ್ರವಾಸಿಗರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.