
ಕಡೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮತ್ತು ಯುವಜನರಿಗೆ ಸಂಸ್ಕಾರ ಕಲಿಸದಿದ್ದರೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದೊಡ್ಡಮೇಟಿ ಕುರ್ಕೆ ವಿರಕ್ತಮಠದ ಶಶಿಶೇಖರಸಿದ್ಧ ಬಸವ ಸ್ವಾಮೀಜಿ ಎಚ್ಚರಿಸಿದರು.
ಕಡೂರು ತಾಲ್ಲೂಕು ಚೌಳಹಿರಿಯೂರಿನಲ್ಲಿ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸರ್ವಶರಣ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯುವ ಸಮೂಹವು ತನ್ನದೇ ಲೋಕದಲ್ಲಿ ಮುಳುಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ಸಮಾಜಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಚೌಳಹಿರಿಯೂರು ಗ್ರಾಮವು ಸಾಂಸ್ಕೃತಿಕ ನೆಲೆಗಟ್ಟು ಹೊಂದಿದ್ದು ಪ್ರತಿ ವರ್ಷವೂ ತ್ರಿವಿಧ ದಾಸೋಹ ನಡೆಸಿಕೊಂಡು ಬರುತ್ತಿರುವುದು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ. ಗುಡಿ ಗೋಪುರಗಳು ಗೊಂದಲದ ಗೂಡಾಗದೆ, ಶ್ರದ್ಧಾ ಕೇಂದ್ರವಾಗಲಿ ಎಂದು ಹೇಳಿದರು.
ಕೆಪಿಎಸ್ ಶಾಲೆಯ ಶಿಕ್ಷಕ ಕೆ.ಪಿ.ನಾಗರಾಜ್ ಉಪನ್ಯಾಸ ನೀಡಿ, ಸಮಾಜದಲ್ಲಿ ವಚನಕಾರರು ಹಾಕಿಕೊಟ್ಟ ಮಾರ್ಗಸೂಚಿ ಮರೆಯಾಗುತ್ತಿದೆ. ಇಂತಹ ಸರ್ವಶರಣರ ಸಮ್ಮೇಳನಗಳಲ್ಲಿ ಎಲ್ಲ ವರ್ಗದ ಜನರು, ಯುವಕರು, ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಜೀವನದಲ್ಲಿ ದಾರ್ಶನಿಕರು ಮತ್ತು ವಚನಕಾರರ ನುಡಿ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯ ಎಂದರು.
ಬಿ.ಎಸ್.ಯೋಗೀಶ್ ಪ್ರಾಸ್ತಾವಿಕ ನುಡಿಯಲ್ಲಿ ಮಹೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರೆ, ಜಿ.ಅಶೋಕ್‌ಕುಮಾರ್ ಧಾರ್ಮಿಕ ಸಮ್ಮೇಳನಗಳಲ್ಲಿ ವಚನಗಳನ್ನು ಜೀವನಕ್ಕೆ ಅಳವಡಿಸಿಕೊಂಡು ನಡೆಯುವ ಮೂಲಕ ಬದುಕು ಹಸನಾಗಿಸಿಕೊಳ್ಳುವ ಚಿಂತನೆಗಳು ನಡೆಯಬೇಕು ಎಂದರು.
ಸಿಂಚನಾ ಭರತ ನಾಟ್ಯ ಪ್ರದರ್ಶನ ನೀಡಿದರೆ ಬಿಷಜಾಕ್ಷಮ್ಮ, ವೈಷ್ಣವಿ ವಚನಗೀತೆ ಪ್ರಸ್ತುತ ಪಡಿಸಿದರು. ಮಹೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಶೇಖರಪ್ಪ, ಸೋಮೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಿಜ್ಜಳಕುಮಾರ್,ಎಚ್.ಪಿ.ಓಂಕಾರ್, ಮಲ್ಲೇಗೌಡ, ಕಂಬಳಿ ದೇವರಾಜ್ ಮತ್ತು ಗ್ರಾಮಸ್ಥರು ಹಾಜರಿದ್ದರು.