ADVERTISEMENT

ಹಲವರಿಗೆ ಪರಿಹಾರ ಮರೀಚಿಕೆ

ತೆಂಗು ಬೆಳೆ ಪುನಶ್ಚೇತನ– ತಾಂತ್ರಿಕ ದೋಷದ ಕಾರಣ

ಬಾಲು ಮಚ್ಚೇರಿ
Published 9 ನವೆಂಬರ್ 2020, 5:49 IST
Last Updated 9 ನವೆಂಬರ್ 2020, 5:49 IST
ಕಡೂರು ತಾಲ್ಲೂಕಿನ ಅನುತ್ಪಾದಕ ತೆಂಗಿನ ಮರಗಳು- ಸಾಂದರ್ಭಿಕ ಚಿತ್ರ
ಕಡೂರು ತಾಲ್ಲೂಕಿನ ಅನುತ್ಪಾದಕ ತೆಂಗಿನ ಮರಗಳು- ಸಾಂದರ್ಭಿಕ ಚಿತ್ರ   

ಕಡೂರು: ತೆಂಗು ಬೆಳೆ ಪುನಶ್ಚೇತನಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಹಣ ಕೆಲವರಿಗೆ ತಾಂತ್ರಿಕ ಕಾರಣಗಳಿಂದ ತಲುಪಿಲ್ಲದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.

ಸತತ ಬರಗಾಲದಿಂದ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ನೆಲಕಚ್ಚಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ 2017-18ನೇ ಸಾಲಿನಲ್ಲಿ ಅನುತ್ಪಾದಕ ಅಥವಾ ಒಣಗಿದ ತೆಂಗಿನ ಮರಗಳನ್ನು ತೆಗೆದು ಅಲ್ಲಿ ಹೊಸದಾಗಿ ತೆಂಗಿನ ಗಿಡ ಹಾಕಲು ಅನುಕೂಲವಾಗುವಂತೆ ತಲಾ ಒಂದು ಗಿಡಕ್ಕೆ ₹ 400 ಪರಿಹಾರ ಪ್ರಕಟಿಸಿತ್ತು. ಇಂತಹ ಅನುತ್ಪಾದಕ ಮರಗಳ
ಸಮೀಕ್ಷೆ ಮಾಡಲು ಕಂದಾಯ, ತೋಟಗಾರಿಕೆ ಮತ್ತು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ನಿಯೋಜಿಸಲಾಗಿತ್ತು.

2016-17 ನೇ ಸಾಲಿನ ಸಮೀಕ್ಷೆಯನ್ನೇ ಅಧಾರವಾಗಿಟ್ಟು ವಕೊಂಡು 14,912 ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿಯನ್ನು ಜಿಲ್ಲಾ ತಾಂತ್ರಿಕ ಸಮಿತಿಗೆ ಕಳುಹಿಸಲಾಗಿತ್ತು. 3,33,221 ತೆಂಗಿನ ಮರಗಳನ್ನು ಅನುತ್ಪಾದಕ ಎಂದು ಗುರುತಿಸಲಾಗಿತ್ತು. ತಾಂತ್ರಿಕ ಸಮಿತಿ 14,470 ರೈತರ 3,10,550 ಮರಗಳು ಅನುತ್ಪಾದಕ ಎಂದು ಅಂತಿಮಗೊಳಿಸಿತ್ತು.

ADVERTISEMENT

ಈ ರೈತರಿಗೆ ಒಟ್ಟು ಮೂರು ಹಂತದಲ್ಲಿ ಹಣ ಬಿಡುಗಡೆಗೊಂಡಿದೆ. ಮೊದಲ ಹಂತದಲ್ಲಿ 11,668 ರೈತರಿಗೆ ₹ 1,89,39,200, ಎರಡನೇ ಹಂತದಲ್ಲಿ 932 ಫಲಾನುಭವಿಗಳಿಗೆ ₹ 1,53,24,000 ಮತ್ತು ಮೂರನೇ ಹಂತದಲ್ಲಿ 400 ಜನರಿಗೆ ₹ 48,79,200 ಅವರ ಖಾತೆಗೆ ವರ್ಗಾಯಿಸಲಾಗಿದೆ. ಒಟ್ಟು 13 ಸಾವಿರ ಫಲಾನುಭವಿಗಳು ₹ 12,.91 ಕೋಟಿ ಪರಿಹಾರವಾಗಿ ಪಡೆದಿದ್ದಾರೆ.

ಉಳಿದ 1,470 ರೈತರ ಪೈಕಿ 442 ಜನರಿಗೆ ಅನುಮೋದನೆ ದೊರೆತಿಲ್ಲ. 1,028 ರೈತರಿಗೆ ಇಲ್ಲಿಯವರೆಗೆ ಪರಿ ಹಾರದ ಹಣ ದೊರೆತಿಲ್ಲ. ತೋಟ ಗಾರಿಕಾ ಇಲಖೆಯಲ್ಲಿ ಕೇಳಿದರೆ ‘ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ, ನಿಮ್ಮ ಅಕೌಂಟ್ ಎಲ್ಲೆಲ್ಲಿದೆಯೋ ಅಲ್ಲಿ ಚೆಕ್ ಮಾಡಿಸಿ’ ಎಂಬ ಸಿದ್ಧ ಉತ್ತರ ದೊರೆಯುತ್ತದೆ.

ಜೀವನಾಧಾರವಾಗಿದ್ದ ತೆಂಗು ನೆಲಕಚ್ಚಿದರೂ ಮತ್ತೆ ತೆಂಗು ತೋಟ ಮಾಡಬೇಕು. ಅದಕ್ಕೆ ಪೂರಕವಾಗಿ ಈ ಪರಿಹಾರದ ಹಣ ಒಂದಿಷ್ಟು ಸಹಕಾರಿಯಾಗುತ್ತದೆ. ತಾಂತ್ರಿಕ ದೋಷಗಳಿದ್ದರೆ ಅದನ್ನು ಸರಿಪಡಿಸಿ ಫಲಾನುಭವಿಗಳಿಗೆ ಪರಿಹಾರದ ಹಣ ಸಿಗುವಂತೆ ಮಾಡಬೇಕೆಂಬುದು ರೈತರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.