
ಕಳಸ ಬುಡಕಟ್ಟು ರೈತ ಉತ್ಪಾದಕರ ಕಂಪನಿಯನ್ನು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಕಳಸ: ‘ಆಂಧ್ರ ಪ್ರದೇಶದ ಬುಡಕಟ್ಟು ಜನರು ಬೆಳೆಯುವ ಅರಕು ಕಾಫಿ ಗರಿಷ್ಠ ಬೆಲೆಗೆ ಮಾರಾಟ ಆಗುತ್ತಿದೆ. ಅದೇ ಮಾದರಿಯಲ್ಲಿ ಕಳಸ ಬುಡಕಟ್ಟು ಕೃಷಿಕರ ಕಾಫಿ ಮಾರುಕಟ್ಟೆ ಸೃಷ್ಟಿಗೆ ಎಲ್ಲ ಸಹಕಾರ ನೀಡಲಾಗುತ್ತದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಭರವಸೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಕಳಸ ಬುಡಕಟ್ಟು ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿದ ಅವರು, ‘ಆಂಧ್ರ ಮೂಲದ ಇನ್ಸಸ್ಟೆಂಟ್ ಕಾಫಿ ಸಂಸ್ಥೆ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಸದ್ಯದಲ್ಲೇ ಆ ಸಂಸ್ಥೆಯ ಮುಖ್ಯಸ್ಥರು ಕಳಸಕ್ಕೆ ಬರಲಿದ್ದಾರೆ. ಕಳಸದ ಬುಡಕಟ್ಟು ಜನರ ಕಾಫಿಗೆ ಗರಿಷ್ಠ ಬೆಲೆ ದೊರಕಿಸುವ ಪ್ರಯತ್ನ ನಡೆಸಲಾಗುತ್ತದೆ’ ಎಂದರು.
ಕಳಸ ತಾಲ್ಲೂಕಿನ 600 ಬುಡಕಟ್ಟು ಕೃಷಿಕರು 20 ಸಾವಿರ ಚೀಲ ಕಾಫಿ ಬೆಳೆಯುತ್ತಿದ್ದು, ಕಳಸದಲ್ಲಿ ಇರುವ ಕ್ಯೂರಿಂಗ್ ವಕ್ರ್ಸ್ ಉಪಯೋಗಿಸಿಕೊಂಡು ಮೌಲ್ಯವರ್ಧನೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಕಳಸ ಬುಡಕಟ್ಟು ಬೆಳೆಗಾರರ ಕಾಫಿ ಬ್ರ್ಯಾಂಡಿಂಗ್ ಮಾಡಲು ಎಲ್ಲ ಅವಕಾಶ ಇದೆ. ವೆಯೆಟ್ನಾಂ ದೇಶದಲ್ಲಿ ಕ್ಲೋನಲ್ ಗಿಡ ಬಳಸಿ ಎಕರೆಗೆ 80 ಚೀಲ ಕಾಫಿ ಕೊಯ್ಯುತ್ತಾರೆ. ಇಲ್ಲಿ ಕೂಡ ಕ್ಲೋನಲ್ ಗಿಡ ಬೆಳೆಸಲು ಮಂಡಳಿ ಅಗತ್ಯ ಸಹಕಾರ ನೀಡುತ್ತದೆ. ಕಳಸದಲ್ಲಿ ವರ್ಷಕ್ಕೆ ಕನಿಷ್ಠ 50 ಸಾವಿರ ಕ್ಲೋನಲ್ ಗಿಡ ಬೆಳೆಸಬಹುದು ಎಂದು ಅವರು ಸಲಹೆ ನೀಡಿದರು.
ಬುಡಕಟ್ಟು ರೈತ ಉತ್ಪಾದಕರ ಕಂಪನಿಯ ಲಾಂಚನ ಬಿಡುಗಡೆ ಮಾಡಿದ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಎಂ. ಸೆಂಥಿಲ್‍ಕುಮಾರ್, ‘ದೇಶದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕಳಸ ಬುಡಕಟ್ಟು ರೈತರಿಗೆ ಮಣ್ಣು ಪರೀಕ್ಷೆ ಸೇರಿದಂತೆ ಯಾವುದೇ ತರಬೇತಿಯನ್ನು ನಮ್ಮ ಸಂಸ್ಥೆ ವ್ಯವಸ್ಥೆ ಮಾಡುತ್ತದೆ. ನೆರಳನ್ನು ಸಂಪೂರ್ಣವಾಗಿ ತೆಗೆಯದೆ ಕಾಫಿ ಕೃಷಿ ಮಾಡಬೇಕು’ ಎಂದರು.
ಕ್ಲೋನಲ್ ಗಿಡಗಳ ನರ್ಸರಿ ಮಾಡುವುದಾದರೆ ಅಗತ್ಯ ಸಹಕಾರ ಮತ್ತು ತಾಂತ್ರಿಕತೆ ಪೂರೈಸುತ್ತೇವೆ. ಬುಡಕಟ್ಟು ರೈತ ಉತ್ಪಾದಕರ ಸಂಸ್ಥೆಯು ಕಾಫಿ ಜೊತೆಗೆ ಔಷಧೀಯ ಸಸ್ಯ, ಜೇನು ಸಾಕಣೆ ಮತ್ತಿತರ ಚಟುವಟಿಕೆ ನಡೆಸಿ ಹೆಚ್ಚುವರಿ ಆದಾಯ ಗಳಿಸಲಿ ಎಂದು ಅವರು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಅನಿಲ್ ಮುಜೇಕಾನು, ‘ಬುಡಕಟ್ಟು ರೈತರ ಸಂಸ್ಥೆಗೆ ಕಾಫಿ ಮಂಡಳಿ ಸತತವಾಗಿ ನೆರವು ನೀಡುತ್ತಿದ್ದು, ಇದರಿಂದ ನೂರಾರು ಜನರು ಕಾಫಿ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯ ಹಕ್ಕುಪತ್ರ ಇದ್ದವರಿಗೂ ಕಾಫಿ ಕಣ, ಕೆರೆ, ಬಾವಿ ನಿರ್ಮಾಣಕ್ಕೆ ಸಹಾಯಧನ ಸಿಕ್ಕಿದೆ. ಸದ್ಯಕ್ಕೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಕೊಡಲಾಗುತ್ತಿದ್ದು, ಭವಿಷ್ಯದಲ್ಲಿ ಪಲ್ಪರ್ ಘಟಕ ಸ್ಥಾಪಿಸುವ ಉದ್ದೇಶ ಇದೆ’ ಎಂದರು.
ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಆರ್. ಓಬಯ್ಯ ಅಧ್ಯಕ್ಷತೆ ವಹಿಸಿದ್ದರು. ಐಟಿಡಿಪಿ ಅಧಿಕಾರಿ ಆರ್. ರಮೇಶ್, ಕೃಷಿ ವಿಜ್ಞಾನ ಕೇಂದ್ರದ ಡಾ. ಎ.ಟಿ. ಕೃಷ್ಣಮೂರ್ತಿ, ಕಾಫಿ ಮಂಡಳಿಯ ವೆಂಕಟರೆಡ್ಡಿ, ಡಾ. ಟಿ.ಎನ್. ಗೋಪಿನಂದನ್, ಡಾ. ನವೀನ್ ಕುಮಾರ್, ಡಾ. ಅಶ್ವಿನಿ ಕುಮಾರ್, ಹಡಗಲಿ ವಿಶ್ವನಾಥ್, ಡಾ. ಪ್ರಭು ಗೌಡ, ಷಣ್ಮುಗ ಸುರೇಂದ್ರನ್, ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘದ ಸತೀಶ್ ಒಡ್ಡಿಕಟ್ಟೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.