ADVERTISEMENT

ಕಳಸ | ಕೊಳೆ ರೋಗ: ಕಾಫಿ ಇಳುವರಿ ಕುಸಿತ ಭೀತಿ

ರವಿ ಕೆಳಂಗಡಿ
Published 15 ಜುಲೈ 2025, 7:54 IST
Last Updated 15 ಜುಲೈ 2025, 7:54 IST
ಕಳಸದಲ್ಲಿ ರೊಬಸ್ಟಾ ಕಾಫಿ ಬೆಳೆಗೆ ಕಪ್ಪು ಕೊಳೆ ರೋಗ ತಗುಲಿರುವುದು
ಕಳಸದಲ್ಲಿ ರೊಬಸ್ಟಾ ಕಾಫಿ ಬೆಳೆಗೆ ಕಪ್ಪು ಕೊಳೆ ರೋಗ ತಗುಲಿರುವುದು   

ಕಳಸ: ತಾಲ್ಲೂಕಿನಲ್ಲಿ ಸತತ ಎರಡು ತಿಂಗಳ ಮಳೆಯು ಕಾಫಿ ಫಸಲಿಗೆ ಹಾನಿ ತರುತ್ತಿದೆ. ಕೊಳೆ ರೋಗದ ಬಾಧೆಯಿಂದ ಕಾಫಿ ಫಸಲು ನೆಲಕಚ್ಚುತ್ತಿದ್ದು ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಕಳೆದ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೂ ಬೇಸಿಗೆಯಲ್ಲಿ ಆಗಾಗ್ಗೆ ಸುರಿದ ಮಳೆ ಕಾಫಿ ಫಸಲು ಕಾಯಿ ಕಟ್ಟಲು ಸಹಕಾರಿ ಆಗಿತ್ತು. ಉತ್ತಮ ಫಸಲಿನ ನಿರೀಕ್ಷೆ ಜೊತೆಗೆ ಉತ್ತಮ ಧಾರಣೆ ಕೂಡ ಇದ್ದಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ದುಬಾರಿ ಗೊಬ್ಬರ ಬಳಸಿ, ಮರಗಸಿ ಮಾಡಿ ತೋಟದ ನಿರ್ವಹಣೆ ಅಚ್ಚುಕಟ್ಟಾಗಿದ್ದರಿಂದ ಬಂಪರ್ ಫಸಲಿನ ಕನಸು ಮೂಡಿತ್ತು.

ಆದರೆ ಮೇ ತಿಂಗಳ ಮಧ್ಯಭಾಗದಿಂದ ಸತತವಾಗಿ ಎರಡು ತಿಂಗಳ ಕಾಲ ಸುರಿದ ಮಳೆಯು ಕಾಫಿ ತೋಟದಲ್ಲಿ ತೇವಾಂಶ ಜಾಸ್ತಿ ಮಾಡಿದೆ. ಕಾಫಿ ಗಿಡದ ಬೇರುಗಳಿಗೆ ಗಾಳಿ ಪೂರೈಕೆ ಆಗದೆ ಹಸಿರು ಕಾಯಿಗಳು ನೆಲಕ್ಕೆ ಉದುರಿವೆ. ಶಿಲೀಂಧ್ರಗಳಿಂದ ಬಾಧಿಸುವ ಕಪ್ಪು ಕೊಳೆ ರೋಗ ಕೂಡ ತೋಟಗಳಲ್ಲಿ ಹರಡುತ್ತಿದೆ. ಕೊಳೆ ಕಾಯಿಗಳು ಗೊಂಚಲುಗಳಲ್ಲಿ ಕಂಡು ಬರುತ್ತಿವೆ. ಇದನ್ನು ಕಂಡು ಬೆಳೆಗಾರರು ಕಂಗಾಲು ಆಗಿದ್ದಾರೆ. ಮುಂದಿನ ಹಂಗಾಮಿನ ಬಂಪರ್ ಫಸಲಿನ ಕನಸು ನಿಧಾನವಾಗಿ ಕರಗುತ್ತಿದೆ.

ADVERTISEMENT


ಕಾಫಿ ಮಂಡಳಿಯು ಕೊಳೆ ಕಾಯಿ ಹಾಗೂ ಕೊಳೆ ಸೊಪ್ಪು ತೆಗೆದು ರೋಗ ಹರಡದಂತೆ ಎಚ್ಚರಿಕೆ ವಹಿಸಲು ಸಲಹೆ ನೀಡುತ್ತಿದೆ. ಗಿಡಗಳಿಗೆ ರಸಗೊಬ್ಬರ ನೀಡುವುದರ ಜೊತೆಗೆ ಔಷಧಿ ಸಿಂಪಡಣೆಗೂ ಸಲಹೆ ನೀಡುತ್ತಿದೆ. ಆದರೆ ಕಾಫಿ ಧಾರಣೆಯು ಕಳೆದ ತಿಂಗಳಿನಿಂದ ಶೇ 35ರಷ್ಟು ಕುಸಿದಿದ್ದು ಬೆಳೆಗಾರರಲ್ಲಿ ಹುಮ್ಮಸ್ಸು ಕಡಿಮೆ ಆಗಿದೆ.ಮೇ ತಿಂಗಳ ಕೊನೆ ಭಾಗದಲ್ಲಿ ಭರ್ಜರಿ ಫಸಲು ಮತ್ತು ಗರಿಷ್ಟ ಬೆಲೆ ಇತ್ತು. ಆಗ ಬೆಳೆಗಾರರಲ್ಲಿ ಮೂಡಿದ್ದ ಆತ್ಮವಿಶ್ವಾಸ ಇದೀಗ ಕಡಿಮೆ ಆಗಿದೆ.

‘ಪ್ರಕೃತಿ ಮುಂದೆ ನಮ್ಮ ಯಾವ ಲೆಕ್ಕಾಚಾರವೂ ನಡೆಯುವುದಿಲ್ಲ. ಈಗ ಮಳೆಯು ಬಿಡುವು ಕೊಟ್ಟರೆ ಗೊಬ್ಬರ ಪೂರೈಸಿ ಗಿಡದಲ್ಲಿ ಇರುವ ಫಸಲನ್ನು ಉಳಿಸಿಕೊಳ್ಳುವುದಷ್ಟೇ ನಮ್ಮ ಕೈಯಲ್ಲಿದೆ' ಎಂದು ಅನುಭವಿ ಬೆಳೆಗಾರ ಕುಂಬಳಡಿಕೆ ರಾಘವೇಂದ್ರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.