ADVERTISEMENT

ಕಾಫಿ ರಫ್ತಿಗೆ ಜಿಲ್ಲಾಡಳಿತದ ಸಹಾಯ ಅಗತ್ಯ: ಹಾಸನ ಮೆಗಾ ಫುಡ್ ಪಾರ್ಕ್ ಸಿಇಒ ಅಶೋಕ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:04 IST
Last Updated 14 ಆಗಸ್ಟ್ 2025, 6:04 IST
ಅಶೋಕ್
ಅಶೋಕ್   

ಚಿಕ್ಕಮಗಳೂರು: ಕಾಫಿ ರಫ್ತು ಮಾಡಲು ಜಿಲ್ಲಾಡಳಿತ ಹಾಗೂ ಸರ್ಕಾರದ ಆರ್ಥಿಕ ಸಹಾಯ ಅಗತ್ಯ ಎಂದು ಹಾಸನ ಮೆಗಾ ಫುಡ್ ಪಾರ್ಕ್ ಸಿಇಒ ಅಶೋಕ್ ಹೇಳಿದರು.

‘ಕಳೆದ ತಿಂಗಳು ಅಮೆರಿಕ ಮೂಲದ ಒಂದು ಸಂಸ್ಥೆಗೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಚಂದುವಳ್ಳಿ ಗ್ರಾಮದ ರೈತ ಜಾನ್ ಸಂತೋಷ ಡಿಸೋಜ ಅವರ ರೊಬಸ್ಟಾ ಕಾಫಿ ಮಾದರಿಯನ್ನು ಕಳಿಸಿದ್ದೆವು. ಆ ಮಾದರಿಯು ಅಮೆರಿಕಾ ಮತ್ತು ಯುರೋಪ್ ದೇಶಗಳ ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದೆ. ಅದರಂತೆ ಸುಮಾರು ₹2 ಕೋಟಿ ಮೌಲ್ಯದ ಕಾಫಿ ರಫ್ತು ಆದೇಶ ಅದೇ ಸಂಸ್ಥೆಯಿಂದ ಬಂದಿತ್ತು. ಅದರಂತೆ ನಾವು ಹಣಕಾಸು ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ 50ರಷ್ಟು ಪ್ರತಿಸುಂಕ ನಿರ್ಧಾರವು ರಫ್ತು ಮಾಡಲು ಆರ್ಥಿಕವಾಗಿ ಹೊರೆ ತಂದಿದೆ. ಆದ್ದರಿಂದ ರಫ್ತು ಕೈ ಬಿಡಬೇಕೊ ಅಥವಾ ಮುಂದುವರೆಸಬೇಕೊ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ADVERTISEMENT

‘ನಮ್ಮದು ನವೋದ್ಯಮ ಸಂಸ್ಥೆಯಾಗಿದ್ದು, ಸರ್ಕಾರದ 2024ರ ವಿಜೇತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ನಾವು ಈ ಹಿಂದೆ ತೆಂಗಿನಕಾಯಿ 6 ಬಾರಿ ಮಾದರಿ ಕಳುಹಿಸಿ 7ನೇ ಬಾರಿಗೆ ರಫ್ತು ಆದೇಶ ಪಡೆದುಕೊಂಡಿದ್ದೇವೆ. ಆದರೆ, ಕಾಫಿ ವಿಷಯದಲ್ಲಿ ಮೊದಲ ಬಾರಿಗೆ ಕಳುಹಿಸಿದ ಮಾದರಿ ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದೆ’ ಎಂದು ತಿಳಿಸಿದರು.

‘ಒಂದು ದೇಶಕ್ಕೆ ರಫ್ತು ಎಷ್ಟು ಮುಖ್ಯ ಎನ್ನುವುದು ಜಿಲ್ಲಾಡಳಿತ ಮನಗಂಡು ನಮ್ಮ ಸಂಸ್ಥೆಗೆ ಆರ್ಥಿಕವಾಗಿ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.