ಮೂಡಿಗೆರೆ: ತಾಲ್ಲೂಕಿನ ಜಪಾವತಿ ನದಿ ಒಡಲಿಗೆ ಕಾಫಿ ಪಲ್ಪರ್ ತ್ಯಾಜ್ಯವನ್ನು ಹರಿಬಿಟ್ಟಿದ್ದು, ಇಡೀ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.
ತಾಲ್ಲೂಕಿನ ಪ್ರವಾಸಿ ತಾಣವಾದ ಎತ್ತಿನಭುಜ ಸಮೀಪದಲ್ಲಿ ಉಗಮ ಕಾಣುವ ಜಪಾವತಿ ನದಿಯು, ಊರುಬಗೆ, ಮೇಕನಗದ್ದೆ, ದೇವರುಂದ, ಕಜ್ಜೆಹಳ್ಳಿ, ಕಿರುಗುಂದ, ಹೆಗ್ಗರವಳ್ಳಿ ಮೂಲಕ ಸಾಗಿ ಹೇಮಾವತಿ ನದಿಯನ್ನು ಸೇರಿಕೊಳ್ಳುತ್ತದೆ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಯುದ್ದಕ್ಕೂ ಹರಿದುಹೋಗುವ ಜಪಾವತಿ ನದಿಗೆ ಕೆಲವು ಕಾಫಿ ಎಸ್ಟೇಟ್ ಮಾಲೀಕರು ಕಾಫಿ ಸಂಸ್ಕರಿಸಿದ ತ್ಯಾಜ್ಯಯುಕ್ತ ಪಲ್ಪರ್ ನೀರು ಹರಿಬಿಡುತ್ತಿರುವುದರಿಂದ ನದಿ ನೀರು ಮಲಿನಗೊಂಡಿದ್ದು, ಜಲಚರಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜಪಾವತಿ ನದಿ ಪಾತ್ರದ ಗ್ರಾಮಗಳಲ್ಲಿ ನದಿಯ ನೀರನ್ನು ಕುಡಿಯಲು ಮತ್ತು ಗೃಹ ಬಳಕೆಗೂ ಬಳಸಲಾಗುತ್ತಿದೆ. ನೀರು ಮಲಿನವಾಗಿರುವುದರಿಂದ ಚರ್ಮರೋಗ, ಕೆಮ್ಮು, ಶೀತದ ಲಕ್ಷಣಗಳು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಪಾವತಿ ನದಿನೀರು ಬಳಕೆಯಿಂದ ಜನರು ಹಾಗೂ ಜಾನುವಾರುಗಳಿಗೆ ರೋಗ ಹರಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ, ನದಿಗೆ ಪಲ್ಪರ್ ತ್ಯಾಜ್ಯ ಬಿಡುತ್ತಿರುವ ಎಸ್ಟೇಟ್ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಜಿಲ್ಲಾಡಳಿತದ ಕ್ರಮಕ್ಕೆ ಆಗ್ರಹ
ಜಪಾವತಿ ನದಿಗೆ ಕೆಲವು ದಿನಗಳಿಂದ ನಾಲ್ಕೈದು ಎಸ್ಟೇಟ್‌ಗಳವರು ಕಾಫಿ ಪಲ್ಪರ್ ತ್ಯಾಜ್ಯ ಹರಿಬಿಡುತ್ತಿದ್ದಾರೆ. ಎಸ್ಟೇಟ್‌ನವರು ಪ್ರಭಾವಿಗಳಾಗಿರುವುದರಿಂದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಕುಡಿಯಲು ಯೋಗ್ಯವಿಲ್ಲ. ಕೂಡಲೇ ಜಿಲ್ಲಾಡಳಿತ ಕ್ರಮ ವಹಿಸಿ ನದಿಗೆ ತ್ಯಾಜ್ಯ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಿರುಗುಂದ ಗ್ರಾಮದ ಕೆ.ಕೆ. ಚಂದ್ರಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.