
ಬಾಳೆಹೊನ್ನೂರು (ಚಿಕ್ಕಮಗಳೂರು): ಇಲ್ಲಿಗೆ ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಎರಡು ನೂತನ ಕಾಫಿ ತಳಿ, ಕಾಫಿ ಕ್ಯಾಪ್ಸೂಲ್ ಹಾಗೂ ಮೈಕ್ರೊ ನ್ಯೂಟ್ರಿಯಂಟ್ ಒಳಗೊಂಡ ಸ್ಪ್ರೇ ಅನ್ನು ಬಿಡುಗಡೆ ಮಾಡಲಾಯಿತು.
ವೈಟ್ ಸ್ಟೆಮ್ ಬೋರರ್ (ಕಾಫಿ ಬೆಳೆಗೆ ಗಂಭೀರ ಹಾನಿ ಮಾಡುವ ಕೀಟ) ತಡೆಗಟ್ಟುವ ಗುಣ ಹೊಂದಿರುವ ಅರೇಬಿಕಾ ವರ್ಗದ ‘ಸುರಕ್ಷಾ’ ಮತ್ತು ‘ಶತಾಬ್ದಿ’ ಎಂಬ ಎರಡು ನೂತನ ತಳಿಗಳನ್ನು ಬಿಡುಗಡೆ ಮಾಡಲಾಯಿತು.
ಕಾಫಿ ಬೀಜಗಳನ್ನು ನಾಟಿ ಮಾಡಿದಾಗ ಅವುಗಳು ಇರುವೆ, ಪ್ರಾಣಿಗಳಿಗೆ ಆಹಾರವಾಗುವುದು ಸಾಮಾನ್ಯ. ಅದನ್ನು ತಪ್ಪಿಸುವ ಉದ್ದೇಶದಿಂದ ಇದೀಗ ಕ್ಯಾಪ್ಸೂಲ್ ಒಳಗಡೆ ಬೀಜಗಳನ್ನು ಇಟ್ಟು ಕ್ಯಾಪ್ಸೂಲ್ ಸಹಿತ ಬೀಜವನ್ನು ನಾಟಿ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಇದರಿಂದ ಕಾಫಿ ಸಸಿಗಳು ಹುಟ್ಟುವ ಪ್ರಮಾಣ ಹೆಚ್ಚಾಗುತ್ತದೆ.
ಕಾಫಿಗೆ ಬೇಕಾಗುವ ಸೆಕೆಂಡರಿ ಮತ್ತು ಮೈಕ್ರೊ ನ್ಯೂಟ್ರಿಯಂಟ್ ಒಳಗೊಂಡ ‘ಸಿಸಿಆರ್‌ಐ ಕಾಫಿ ಸ್ಪೆಷಲ್’ ಎಂಬ ಸ್ಪ್ರೇಯನ್ನು ಬಿಡುಗಡೆ ಮಾಡಲಾಯಿತು. ಜಿಂಕ್, ಬೋರಾನ್ ಕೊರತೆ ಕಂಡು ಬಂದಾಗ ಬೆಳೆಗಾರರು ಬೇರೆ ಬೇರೆ ಗೊಬ್ಬರಗಳನ್ನು ತಂದು ಒಟ್ಟು ಮಾಡಿ ತೋಟಗಳಿಗೆ ಹಾಕುವುದು ವಾಡಿಕೆ. ಹಾಗೆ ಮಾಡುವಾಗ ಅದರ ಬೆಲೆ ಕೂಡ ಜಾಸ್ತಿಯಾಗುತ್ತದೆ. ಅರೇಬಿಕಾ ಮತ್ತು ರೋಬಸ್ಟಾದಲ್ಲಿ ಮೈಕ್ರೊ ನ್ಯೂಟ್ರಿಯಂಟ್ ಕೊರತೆಯಾದಾಗ ಇದನ್ನು ಬಳಸಬಹುದು. ಒಂದು ಎಕರೆಗೆ ಮೂರು ಬ್ಯಾರಲ್ ಬೇಕಾಗುತ್ತದೆ. ಇದರಲ್ಲಿ ಸಲ್ಫರ್, ಜಿಂಕ್, ಬೋರಾನ್ ಮೇಗ್ನಿಶಿಯಂ ಇದೆ. ಇದನ್ನು ಬಳಸುವುದರಿಂದ ಕಾಫಿ ಹಣ್ಣಿನ ಗಾತ್ರ, ಫಸಲು ಹೆಚ್ಚಲಿದೆ ಎಂದು ವಿಜ್ಞಾನಿಗಳು ತಿಳಿಸಿದರು.
ಶನಿವಾರದಿಂದ ಆರಂಭಗೊಂಡಿ ರುವ ಶತಮಾನೋತ್ಸವ ಕಾರ್ಯಕ್ರಮ 22ರ ವರೆಗೆ ನಡೆಯಲಿದೆ. ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಕಂಪನಿಗಳ 100ಕ್ಕೂ ಅಧಿಕ ಪ್ರದರ್ಶನ ಮಳಿಗೆ
ಆರಂಭಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಕಾಫಿ ಮಂಡಳಿ ಸಿಇಒ ಕೂರ್ಮರಾವ್, ಸಂಶೋಧನಾ ಕೇಂದ್ರದ ನಿರ್ದೇಶಕ ಸೆಂಥಿಲ್ ಕುಮಾರ್ ಪಾಲ್ಗೊಂಡಿದ್ದರು.
ಅಕ್ರಮ ವಲಸಿಗರನ್ನು ಪತ್ತೆ ಮಾಡಿ: ಸಿ.ಟಿ.ರವಿ
ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಅಸ್ಸಾಂ, ಒಡಿಶಾ, ಬಿಹಾರದಿಂದ ಬಂದವರು ಎಂದು ಹೇಳಿಕೊಂಡು ಸಾವಿರಾರು ಕಾರ್ಮಿಕರು ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅದರಲ್ಲಿ ಬಹುತೇಕರು ಬಾಂಗ್ಲಾದೇಶ, ಮ್ಯಾನ್ಮಾರ್ ಮೂಲದ ನುಸುಳುಕೋರರಾಗಿದ್ದಾರೆ. ಸರ್ಕಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಅವರನ್ನು ಪತ್ತೆ ಮಾಡಬೇಕು. ಅವರು ಹೊರ ದೇಶದವರೇ ಆಗಿದ್ದರೆ ಅವರಿಗೆ ಉದ್ಯೋಗ ವೀಸಾ (ವರ್ಕಿಂಗ್ ವೀಸಾ) ನೀಡಲಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಬಾರಿ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನೆಲದಲ್ಲಿ ನಾವುಗಳೇ ಪರದೇಶಿಗಳಾಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.