ADVERTISEMENT

370 ಬೆಳೆಗಾರರಿಗೆ ಬಾರದ ಪರಿಹಾರ

ಸತತ ಬರದಿಂದ ತೆಂಗಿನ ಮರಗಳಿಗೆ ಹಾನಿ– ಗೊಂದಲದಲ್ಲಿ ಸಂತ್ರಸ್ತ ರೈತರು

ಬಾಲು ಮಚ್ಚೇರಿ
Published 3 ಮಾರ್ಚ್ 2021, 3:02 IST
Last Updated 3 ಮಾರ್ಚ್ 2021, 3:02 IST
ಚಿಕ್ಕತಂಗಲಿ ಈಶ್ವರಪ್ಪ
ಚಿಕ್ಕತಂಗಲಿ ಈಶ್ವರಪ್ಪ   

ಕಡೂರು: ತೆಂಗು ಬೆಳೆಗಾರರಿಗೆ 2019-20ರಲ್ಲಿ ನೀಡಲಾಗಿದ್ದ ಪರಿಹಾರದ ಹಣ ಹಲವು ಫಲಾನುಭವಿಗಳಿಗೆ ಇನ್ನೂ ಸಂದಾಯವಾಗಿಲ್ಲ. ಈ ಸ್ಪಷ್ಟ ಕಾರಣಗಳು ದೊರೆಯದೆ ಕೆಲ ಬೆಳೆಗಾರರು ಗೊಂದಲದಲ್ಲಿದ್ದಾರೆ.

ಪ್ರಮುಖವಾಗಿ ತೆಂಗು ಬೆಳೆಯುವ ಕಡೂರು ತಾಲ್ಲೂಕಿನ ರೈತರು ಸತತ ಬರದಿಂದ ಕಂಗೆಟ್ಟಿದ್ದರು. ತೆಂಗಿನ ಮರಗಳು ನೆಲಕಚ್ಚಿ ತೀವ್ರ ನಷ್ಟವಾಗಿತ್ತು. ಇಂತಹ ಸಮಯದಲ್ಲಿ ಹಾಳಾದ ಮತ್ತು ಅನುತ್ಪಾದಕ ತೆಂಗಿನ ಮರಗಳಿಗೆ ತಲಾ ₹ 400 ಪರಿಹಾರ ಧನವನ್ನು ಸರ್ಕಾರ ಪ್ರಕಟಿಸಿತ್ತು. ಈ ಕುರಿತು ಅನುತ್ಪಾದಕ ತೆಂಗಿನ ಮರಗಳ ಸಮೀಕ್ಷೆಯನ್ನು ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಸಂಯುಕ್ತವಾಗಿ ನಡೆಸಿ ತಾಲ್ಲೂಕಿನಲ್ಲಿ ಒಟ್ಟು 3,10,550 ಮರಗಳು ಅನುತ್ಪಾದಕವಾಗಿವೆ ಎಂದು ವರದಿ ತಯಾರಿಸಿತ್ತು. ಆ ಪ್ರಕಾರ ಒಟ್ಟು ಫಲಾನುಭವಿಗಳ ಪಟ್ಟಿ ತಯಾರಿಸಿ, ನಷ್ಟವಾದ ಮರಗಳ ಆಧಾರದಲ್ಲಿ ಪರಿಹಾರದ ಮೊತ್ತವನ್ನು ಫಲಾನು ಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗಿತ್ತು.

ಆಯ್ಕೆಯಾದ ಫಲಾನುಭವಿಗಳಲ್ಲಿ ಇನ್ನೂ 370 ಮಂದಿಗೆ ಪರಿಹಾರ ಕೈ ಸೇರಿಲ್ಲ. ಇದಕ್ಕೆ ಕಾರಣ ವೇನೆಂಬ ಬಗ್ಗೆ ಸ್ಪಷ್ಟ ಉತ್ತರವೂ ಅವರಿಗೆ ಸಿಕ್ಕಿಲ್ಲ. ತೋಟಗಾರಿಕಾ ಇಲಾಖೆ ಯಲ್ಲಿಯೂ ಇದರ ಬಗ್ಗೆ ಮಾಹಿತಿಯಿಲ್ಲ. ರೈತರು ಕಚೇರಿಗೆ ಎಡತಾಕಿದ್ದೇ ಬಂತು. ಪರಿಹಾರದ ಹಣ ಕೈಸೇರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಪರಿಹಾರದ ಮೊತ್ತ ಮಂಜೂರಾಗಿ ಡಿಬಿಟಿ (ನೇರ ಫಲಾನುಭವಿ ಖಾತೆಗೆ ಜಮಾ ತಂತ್ರಾಂಶ) ಗೆ ಅಪ್‌ಲೋಡ್ ಆಗಿಯೂ ಪರಿಹಾರ ಬಾರದಿರುವವರ ಸಂಖ್ಯೆ 250. ಪರಿಹಾರ ಮಂಜೂ ರಾಗಿದ್ದರೂ ಡಿಬಿಟಿಗೆ ಅಪ್‌ಲೋಡ್ ಆಗದೆ ಇರುವವರ ಸಂಖ್ಯೆ 120. ಕಡೂರು ತಾಲ್ಲೂಕಿಗೆ ಹಂಚಿಕೆ ಯಾಗಿರುವ ಅನುದಾನ ₹13.13 ಕೋಟಿ. ಸಂದಾಯ ವಾಗಿರುವುದು ₹11.45 ಕೋಟಿ. ಸಂದಾಯವಾಗದೆ ಉಳಿದಿರುವ ಮೊತ್ತ ₹41.97 ಲಕ್ಷ.

‘ಉಳಿಕೆ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ. ಡಿಬಿಟಿ ಅಪ್‌ಲೋಡ್ ಆಗಿರುವ ಪ್ರಕರಣಗಳಲ್ಲಿ ಪರಿಹಾರದ ಮೊತ್ತ ಪಾವತಿ ಯಾವ ಹಂತದಲ್ಲಿದೆ ಎಂಬುದನ್ನು ನೋಡಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ. ಉಳಿದ ಫಲಾನುಭವಿಗಳಿಂದ ಕೆಲ ದಾಖಲೆ ಪಡೆಯುವ ಅಗತ್ಯವಿದ್ದು, ಅವರ ಹೆಸರು ಮತ್ತು ಬೇಕಿರುವ ಅಗತ್ಯ ದಾಖಲೆಗಳ ಬಗ್ಗೆ ವಿವರವನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಪಟ್ಟಿಯಲ್ಲಿರುವ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ನೀಡಬೇಕು’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ತಿಳಿಸಿದರು.

ಐದು ವರ್ಷಗಳ ಸತತ ಬರದಲ್ಲಿ ಬಸವಳಿದ ತೆಂಗು ಬೆಳೆಗಾರರಿಗೆ ಒಂದಿಷ್ಟು ಸಹಾಯಕವಾಗುವ ಪರಿಹಾರ ಧನ ಬೇಗ ಬಂದರೆ ಅನುಕೂಲವಾದೀತೆಂಬುದು ಪರಿಹಾರ ಬಾರದ ರೈತರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.