ADVERTISEMENT

‘ಸಮಾಜದಲ್ಲಿ ಸತ್ಯ–ಸುಳ್ಳಿನ ಗೊಂದಲ’

ಶೃಂಗೇರಿ:ರೋಟರಿ ಜಿಲ್ಲಾ ಮಟ್ಟದ ಶೃಂಗ ವೈಭವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:46 IST
Last Updated 26 ನವೆಂಬರ್ 2025, 4:46 IST
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಮಟ್ಟದ ಶೃಂಗ ವೈಭವ ಕಾರ್ಯಕ್ರಮವನ್ನು ಪ್ರಾಂಶುಪಾಲ ಎಂ.ಸ್ವಾಮಿ ಉದ್ಘಾಟಿಸಿದರು
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಮಟ್ಟದ ಶೃಂಗ ವೈಭವ ಕಾರ್ಯಕ್ರಮವನ್ನು ಪ್ರಾಂಶುಪಾಲ ಎಂ.ಸ್ವಾಮಿ ಉದ್ಘಾಟಿಸಿದರು   

ಶೃಂಗೇರಿ: ‘ಸಮಾಜದಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಮುಕ್ತ ಅವಕಾಶಗಳಿವೆ. ಅದರ ಸದುಪಯೋಗವನ್ನು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಒಳಿತಿಗಾಗಿ ಒಂದಾಗೋಣ ಎಂಬುದು ಈ ಬಾರಿಯ ರೋಟರಿ ಸಂಸ್ಥೆಯ ಸರಳವಾದ ಸಂದೇಶ. ಪ್ರಸ್ತುತ ಸಮಾಜದಲ್ಲಿ ಸತ್ಯ ಯಾವುದು? ಸುಳ್ಳು ಯಾವುದು? ಎಂಬ ಗೊಂದಲ ನಮ್ಮಲ್ಲಿದೆ’ ಎಂದು ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ ಹೇಳಿದರು.

ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಮಂಗಳವಾರ ನಡೆದ ರೋಟರಿಯ ಜಿಲ್ಲಾ ಮಟ್ಟದ ಶೃಂಗ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವೆಲ್ಲರೂ ಉತ್ತಮ ಮನಸ್ಸಿನಿಂದ ಒಗ್ಗಟ್ಟಾದರೆ ಎಲ್ಲವನ್ನೂ ಗೆಲ್ಲುವ ಶಕ್ತಿ ಅಂತರಂಗದಲ್ಲಿ ಬರುತ್ತದೆ. ನಮ್ಮ ಸಂಸ್ಕೃತಿಗೆ ಜಗತ್ತಿನಲ್ಲಿ ಉನ್ನತಸ್ಥಾನವಿದೆ. ಸಾಂಸ್ಕೃತಿಕ ನೆಲೆಗಟ್ಟಿನ ಪರಿಕಲ್ಪನೆಯಲ್ಲಿ ನಮ್ಮ ದೇಶ ಜಗತ್ತಿನಲ್ಲಿ ಸದಾ ಮುಂದಿದೆ. ದೇಶದ 140 ಕೋಟಿ ಜನಸಂಖ್ಯೆಯಲ್ಲಿ 52 ಕೋಟಿ ಯುವಕರು ನಮ್ಮಲ್ಲಿದ್ದಾರೆ. ಸಾವಿರಾರು ವರ್ಷದ ಇತಿಹಾಸ ಇರುವ ಸಂಗೀತ ಕಲೆ ಇರುವುದು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಪಕ್ಕವಾದ್ಯಗಳು, ನೃತ್ಯ ಪ್ರಕಾರಗಳು, ಯಕ್ಷಗಾನ, ಜಾನಪದ ಕಲೆಗಳು ನಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಇರುವ ಸಾಂಸ್ಕೃತಿಕ ರೂಪಕ. ಇಂತಹ ಅಮೂಲ್ಯ ಸಂಪತ್ತು ಯುವಪೀಳಿಗೆಗೆ ರವಾನಿಸುವ ಮೂಲಕ ನಾವು ದೇಶವನ್ನು ಭದ್ರವಾದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರೂಪಿಸಬೇಕು. ಯುವಕರು ನಮ್ಮ ದೇಶದ ಹೆಮ್ಮೆಯ ಸಂಪತ್ತು. ನಾವು ಎಲ್ಲಾರಿಗೂ ಒಳಿತು ಬಯಸಿದ್ದರೆ ಮಾತ್ರ ಕಿರಿಯರು ಅದನ್ನು ಮುಂದುವರಿಸಲು ಸಾಧ್ಯ. ಅಂತಹ ಹಾದಿಯಲ್ಲಿ ನಾವು ನಡೆದು ಯುವಪೀಳಿಗೆಗೆ ಆದರ್ಶವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಸ್ವಾಮಿ ಮಾತನಾಡಿ, ‘ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಸ್ವಾರ್ಥ ಸೇವೆ ಮೂಲಕ ಜನರಲ್ಲಿ ಶಾಶ್ವತವಾದ ಸ್ಥಾನ ಗಳಿಸಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ಸದಾ ನಿರತವಾಗಿ ಸಮಸ್ತ ಜನರ ಕ್ರಿಯಾಶೀಲತೆಗೆ ಬದ್ಧವಾಗಿ ದುಡಿಯುತ್ತಿದೆ. ಶೃಂಗೇರಿ ರೋಟರಿ ಸಂಸ್ಥೆ ಮಾದರಿಯಾಗಿದೆ’ ಎಂದರು.

ಜಿಲ್ಲಾ 3182ರ ಗವರ್ನರ್ ಕೆ.ಫಾಲಾಕ್ಷ ಮಾತನಾಡಿ, ‘ಭಾರತದ ಶ್ರೇಷ್ಠ ಸಾಂಸ್ಕೃತಿಕ ಮೌಲ್ಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಇತಿಹಾಸದ ಅನನ್ಯತೆಯನ್ನು ಸಾಕ್ಷಾತ್ಕರಿಸುವ ಪ್ರಕ್ರಿಯೆಗಳಿಗೆ ಸಂಸ್ಥೆಗಳು ಶ್ರಮಿಸಬೇಕು. ಹಿರಿಯರ ಜ್ಞಾನದಿಂದ ಆವಿರ್ಭವಿಸಿದ ಕಲೆಯ ಅರಿವನ್ನು ನಾವು ಸಮಾಜಕ್ಕೆ ನೀಡಬೇಕು. ಆಗ ಮಾತ್ರ ಮೌಲ್ಯಗಳು ಉಳಿಯುತ್ತದೆ’ ಎಂದರು.

ಶೃಂಗ ವೈಭವದಲ್ಲಿ ಹನ್ನೊಂದು ವಲಯಗಳ 85 ರೋಟರಿ ಕ್ಲಬ್‍ಗಳು ಭಾಗವಹಿಸಿದ್ದರು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.

ಸಮಾರಂಭದಲ್ಲಿ ಜಿಲ್ಲಾ 3182ರ ಗವರ್ನರ್ ಕೆ.ಫಾಲಾಕ್ಷ, ಮಾಜಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ವಿನಯ್ ಎಚ್.ಡಿ, ವಲಯ-6ರ ಸಹಾಯಕ ಗವರ್ನರ್ ರಾಜಗೋಪಾಲ್ ಜೋಶಿ, ವಲಯ ಸೇನಾನಿ ಮಹೇಶ್ ಡಿ, ಇವೆಂಟ್‍ನ ಮುಖ್ಯಸ್ಥ ಎಚ್.ಎಸ್. ನಟೇಶ್, ಪ್ರಿಯದರ್ಶಿನಿ ಹೆಗ್ಡೆ, ಸುರೇಂದ್ರ ನಾಯಕ್, ಬಿ.ಎಂ.ಭಟ್, ಬಿ.ಎನ್.ರಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.