ADVERTISEMENT

ಮೂರು ಕೃಷಿ ಕಾಯ್ದೆಗಳ ರದ್ದು ಘೋಷಣೆ: ವಿವಿಧ ಪಕ್ಷ, ಸಂಘಟನೆಗಳ ಸಂಭ್ರಮಾಚರಣೆ

ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 4:40 IST
Last Updated 20 ನವೆಂಬರ್ 2021, 4:40 IST
ಚಿಕ್ಕಮಗಳೂರಿನಲ್ಲಿ ವಿವಿಧ ಪಕ್ಷ, ಸಂಘಟನೆಗಳ ಕಾರ್ಯಕರ್ತರು ನಾಸಿಕ್‌ ಡೋಲ್ ಸದ್ದಿಗೆ ಹೆಜ್ಜೆ ಹಾಕಿದರು. ಆಮ್‌ಆದ್ಮಿ ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಸುಂದರ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಇದ್ದರು (ಎಡಚಿತ್ರ). ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಪಕ್ಷದ ನಗರ ಘಟಕದ ಅಧ್ಯಕ್ಷ ಎ.ಸಿ.ಕುಮಾರ್, ಕಾರ್ಯದರ್ಶಿ ಸಿ.ಕೆ.ಮೂರ್ತಿ ಇದ್ದರು.
ಚಿಕ್ಕಮಗಳೂರಿನಲ್ಲಿ ವಿವಿಧ ಪಕ್ಷ, ಸಂಘಟನೆಗಳ ಕಾರ್ಯಕರ್ತರು ನಾಸಿಕ್‌ ಡೋಲ್ ಸದ್ದಿಗೆ ಹೆಜ್ಜೆ ಹಾಕಿದರು. ಆಮ್‌ಆದ್ಮಿ ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಸುಂದರ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಇದ್ದರು (ಎಡಚಿತ್ರ). ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಪಕ್ಷದ ನಗರ ಘಟಕದ ಅಧ್ಯಕ್ಷ ಎ.ಸಿ.ಕುಮಾರ್, ಕಾರ್ಯದರ್ಶಿ ಸಿ.ಕೆ.ಮೂರ್ತಿ ಇದ್ದರು.   

ಚಿಕ್ಕಮಗಳೂರು: ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದಿರುವುದಕ್ಕೆ ವಿವಿಧ ಪಕ್ಷ, ಸಂಘಟನೆಗಳ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.

ಕಾಂಗ್ರೆಸ್, ಬಿಎಸ್‌ಪಿ, ಸಿಪಿಐ, ಆಮ್‌ಆದ್ಮಿ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ನವಕರ್ನಾಟಕ ಸಂಘದ ಮುಖಂಡರು, ಕಾರ್ಯಕರ್ತರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೇರಿದರು. ಸಾರ್ವಜನಿಕರಿಗೆ ಸಿಹಿ ಹಂಚಿದರು. ನಾಸಿಕ್‌ ಡೋಲ್ ಸದ್ದಿಗೆ ಹೆಜ್ಜೆ ಹಾಕಿ, ಸಂತಸ ಪಟ್ಟರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಬಸವರಾಜ್ ಮಾತನಾಡಿ, ‘ಕೇಂದ್ರ ಸರ್ಕಾರದ ಸರ್ವಾಧಿಕಾರಿ ವರ್ತನೆಯಿಂದ ರೈತರು ದೆಹಲಿ ಗಡಿಯಲ್ಲಿ ಒಂದು ವರ್ಷ ನಿರಂತರ ಚಳವಳಿ ನಡೆಸುವಂತಾಯಿತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲವೆಂದು ನರೇಂದ್ರ ಮೋದಿಯವರಿಗೆ ಅರ್ಥವಾದಂತಿದೆ’ ಎಂದರು.

ADVERTISEMENT

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಂಚ ರಾಜ್ಯಗಳು ಚುನಾವಣೆ ಗಮನದಲ್ಲಿಟ್ಟುಕೊಂಡು, ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಿದೆ’ ಎಂದು ಆರೋಪಿಸಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಕೇಂದ್ರ ಸರ್ಕಾರವು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬಹುದು. ಆದರೆ, ಚಳವಳಿಯಲ್ಲಿ ಮೃತಪಟ್ಟ 700 ಮಂದಿ ರೈತರ ಪ್ರಾಣ ಹಿಂದಿರುಗಿಸಲು ಸಾಧ್ಯವೇ? ಸರ್ಕಾರವು ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ರವೀಶ್‌ ಕ್ಯಾತನಬೀಡು, ಎಂ.ಎಲ್.ಮೂರ್ತಿ, ರಸೂಲ್‌ಖಾನ್, ಸಿಪಿಐ ಮುಖಂಡರಾದ ಎಚ್.ಎಂ. ರೇಣುಕಾರಾಧ್ಯ, ಬಿ.ಅಮ್ಜದ್, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಇದ್ದರು.

ಕಾಯ್ದೆ ರದ್ದು: ಸಂತಸ

ತರೀಕೆರೆ: ‘ದೇಶದ ಅನ್ನದಾತರು ನಡೆಸಿದ ಕೃಷಿ ಕಾಯ್ದೆ ವಿರೋಧಿ ಹೋರಾ ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಇದು ರೈತ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ. ಅನೇಕ ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಇವರ ಹೋರಾಟ ಸ್ಮರಣೀಯ’ ಎಂದು ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕೇಂದ್ರದ ಕಾಯ್ದೆಗಳ ವಿರುದ್ಧ ದಿಟ್ಟತನದಿಂದ ಹೋರಾಟ ನಡೆಸಿ ದೇಶದ ಜನತೆಯ ಬೆಂಬಲ ಗಳಿಸಿದ ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಹೋರಾಟಗಾರರನ್ನು ಅಭಿನಂದಿಸುತ್ತೇನೆ’ ಎಂದು ಬ್ಲಾಕ್ ಕಿಸಾನ್ ಸೆಲ್ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಾ ತಿಳಿಸಿದ್ದಾರೆ.

‘ಸಂಪೂರ್ಣ ಗೆಲುವಲ್ಲ’

ನರಸಿಂಹರಾಜಪುರ: ‘ಒಂದು ವರ್ಷದಿಂದ ನಡೆದ ಹೋರಾಟದಲ್ಲಿ 600ಕ್ಕೂ ಹೆಚ್ಚು ಜನರ ಬಲಿ ಪಡೆದ ನಂತರ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂದೆ ಪಡೆಯುವ ಮೂಲಕ ರೈತನ ಹೋರಾಟ ನ್ಯಾಯಯುತ ಎಂಬುದನ್ನು ಒಪ್ಪಿಕೊಂಡಿದೆ’ ಎಂದು ಮುತ್ತಿನ ಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋ ಹರ್ ತಿಳಿಸಿದ್ದಾರೆ.

‘ಕಾಯ್ದೆ ಹಿಂಪಡೆದ ಮಾತ್ರಕ್ಕೆ ರೈತ ಸಮುದಾಯ ಕೈಕಟ್ಟಿ ಕೂರುವಂತಿಲ್ಲ. ಪ್ರಮುಖ ಬೇಡಿಕೆಯಾಗಿರುವ ರೈತನ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಮೂಲಕ ಭದ್ರತೆ ಒದಗಿಸಬೇಕಿದೆ. ಅದ್ದರಿಂದ ಇದು ಸಂಪೂರ್ಣ ಗೆಲುವಲ್ಲ. ಶೀಘ್ರವೇ ಕೇಂದ್ರ ಸರ್ಕಾರ ಹೋರಾಟ ನಿರತ ರೈತರು, ದೇಶದ ರೈತ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕಾಗಿದೆ’ ಎಂದಿದ್ದಾರೆ.

‘ರೈತರ ಹೋರಾಟವನ್ನು ಆಂದೋಲನ ಜೀವಿಗಳು ಎಂದು ಅವಮಾನಿಸಿದ್ದ ಪ್ರಧಾನಿ ಅವರು ಇಂದು ಕೆಲವು ಚುನಾವಣಾ ಸೋಲು ಹಾಗೂ ಮುಂದೆ ಬರುವ ಚುನಾವಣಾ ಸೋಲಿನ ಭಯಯಿಂದ ಕಾಯ್ದೆಯನ್ನು ವಾಪಸ್‌ ಪಡೆದಿದ್ದಾರೆ’ ಎಂದು ಹೇಳಿದ್ದಾರೆ.

ಪಟಾಕಿ ಸಿಡಿಸಿ, ಸಿಹಿ ಹಂಚಿ ಜೆಡಿಎಸ್ ಸಂಭ್ರಮಾಚರಣೆ

ಚಿಕ್ಕಮಗಳೂರು: ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತ್ಯೇಕವಾಗಿ ಸಂಭ್ರಮಾಚರಣೆ ನಡೆಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚಳವಳಿಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೈತರ ಪರವಾಗಿ ಘೋಷಣೆ ಕೂಗಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ಅಜಿತ್‌ಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸುವುದು ಉತ್ತಮ ಬೆಳವಣಿಗೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಅವರು ಈ ಕಾಯ್ದೆಗಳ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು. ರೈತರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. 700 ಮಂದಿ ರೈತರು ಚಳವಳಿಯಲ್ಲಿ ಮೃತಪಟ್ಟಿದ್ದರು. ರೈತರ ಹೋರಾಟಕ್ಕೆ ಅಂತಿಮವಾಗಿ ಪ್ರತಿಫಲ ಸಿಕ್ಕಿದೆ’ ಎಂದರು.

‘ಕೇಂದ್ರ ಸರ್ಕಾರವು ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಪಕ್ಷದ ಮುಖಂಡರಾದ ಎಚ್.ಎಸ್.ಮಂಜಪ್ಪ, ದೇವಿಪ್ರಸಾದ್, ಚಿದಾನಂದ್, ಮಹಮ್ಮದ್ ಇರ್ಷಾದ್, ಮಂಜುನಾಥ್, ಜಮೀಲ್ ಅಹಮದ್, ದೇವರಾಜ್‌ ಅರಸ್, ನಾರಾಯಣಮೂರ್ತಿ, ಚಂದ್ರಶೇಖರ್, ಎಸ್.ಕೆ.ಅರುಣ್, ಆನಂದೇಗೌಡ, ಫೈರೋಜ್‌ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.