
ಚಿಕ್ಕಮಗಳೂರು: ಎರಡೂವರೆ ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ₹2,500 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿ ಸಹಿಸದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹತಾಶರಾಗಿ ಮನಸೋಇಚ್ಛೆ ಮಾತನಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ ಅಂಶುಮಂತ್ ಹೇಳಿದರು.
‘ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ₹2000 ಕೋಟಿ ದೊರೆತಿದೆ. ನಾವು ಜನಪರ ಎಂಬುದನ್ನು ಸಾಬೀತು ಮಾಡಿದ್ದೇವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ₹ 50 ಕೋಟಿಯಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ಅನುದಾನ ನೀಡಲಾಗಿದೆ. ಮೆಡಿಕಲ್ ಕಾಲೇಜಿಗೆ ₹430 ಕೋಟಿ, ಮೆಸ್ಕಾಂ ಉಪ ಕೇಂದ್ರ ನಿರ್ಮಿಸಲು ₹150 ಕೋಟಿ, ಕೊಪ್ಪದಲ್ಲಿ ತಾಯಿ–ಮಗು ಆಸ್ಪತ್ರೆಗೆ ₹12 ಕೋಟಿ, ಜಯಪುರ ಆಸ್ಪತ್ರೆಗೆ ₹13 ಕೋಟಿ, ಜಯಪುರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸಿ 30 ಹಾಸಿಗೆಗಳ ಕಾಮಗಾರಿಗೆ ₹12 ಕೋಟಿ, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಆಸ್ಪತ್ರೆಗೆ ₹9 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ವಿವರಿಸಿದರು.
ಶೃಂಗೇರಿಯ 100 ಹಾಸಿಗಳ ಆಸ್ಪತ್ರೆಗೆ ₹37 ಕೋಟಿ, ಗ್ರಾಮೀಣ ಪ್ರದೇಶಗಳ ಆರೋಗ್ಯ ದೃಷ್ಟಿಯಿಂದ ₹65 ಲಕ್ಷ ವೆಚ್ಚದ 25 ಕಟ್ಟಡಗಳಿಗೆ ₹1.62 ಕೋಟಿ ಮಂಜೂರಾಗಿದೆ ಎಂದರು.
ಜಿಲ್ಲೆಯಲ್ಲಿ ಎರಡು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಜಿಲ್ಲೆಯ ಬಯಲು ಭಾಗದ ವಿವಿಧ ಕೆರೆಗಳಿಗೆ ನೀರು ತುಂಬಿಸು ಯೋಜನೆಗೆ ₹800 ಕೋಟಿ ಬಿಡುಗಡೆಯಾಗಿದೆ. ತರೀಕೆರೆ, ಅಜ್ಜಂಪುರ ಹಾಗೂ ಹೊಸದುರ್ಗ ಸೇರಿದಂತೆ 400ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲು ₹250 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯಲ್ಲಿ 89 ವಿವಿಧ ಕಾಮಗಾರಿಗಳಿಗೆ ಒಟ್ಟು ₹150 ಕೋಟಿ, ನಗರದಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹20 ಕೋಟಿ, ತರೀಕೆರೆ ಬಸ್ ನಿಲ್ದಾಣ ನಿರ್ಮಾಣಕ್ಕೆ ₹9.15 ಕೋಟಿ, ಕಡೂರು ಬಸ್ ನಿಲ್ದಾಣ ನಿರ್ಮಾಣಕ್ಕೆ ₹5.98 ಕೋಟಿ ಬಿಡುಗಡೆಯಾಗಿದೆ ಎಂದರು.
ಕಡೂರಿಗೆ ₹16 ಕೋಟಿ ಮೊತ್ತದ ಹಾಗೂ ಅಜ್ಜಂಪುರದಲ್ಲಿ ₹10 ಕೋಟಿ ವೆಚ್ಚದ ಪ್ರಜಾಸೌಧ ಕಟ್ಟಡ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ₹7 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಜಿಲ್ಲಾ ಆಟದ ಮೈದಾನದ ಅಭಿವೃದ್ಧಿಗೆ ₹1 ಕೋಟಿ ಹಾಗೂ ಕಡೂರು ಕ್ರೀಡಾಂಗಣ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಕಾರ್ಯ ಪ್ರವೃತ್ತವಾಗಿದ್ದು, ಜಿಲ್ಲೆಗೆ ಮೊದಲ ಹಂತದಲ್ಲೇ ಒಟ್ಟು 15 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ರೋಬಿನ್ ಮೋಸಿಸ್, ಕಾಂಗ್ರೆಸ್ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಹಿರೇಗೌಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.