ಮೂಡಿಗೆರೆ: ‘ಶಾಸಕಿ ನಯನಾ ಮೋಟಮ್ಮ ಅವರು ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಹಿಂದೂಪರ ಸಂಘಟನೆಯಿಂದ ಕಳೆದ ವಾರ ನಡೆದ ಹಿಂದೂ ಸಂಗಮ ಮಹಾ ರ‍್ಯಾಲಿಯಲ್ಲಿ ಭಾಗವಹಿಸಿ ಶಾಸಕ ಸ್ಥಾನಕ್ಕೆ ಅಪಚಾರ ಎಸಗಿದ್ದಾರೆ’ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತವೆಂಬುದು ಇದ್ದರೆ ನಯನಾ ಮೋಟಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಮೊದಲ ಬಾರಿಗೆ ಶಾಸಕಿಯಾಗಿರುವ ನಯನಾ ಮೋಟಮ್ಮ ಅವರಿಗೆ ತಿಳಿವಳಿಕೆ ಕಡಿಮೆಯಿದೆ. ಅವರ ತಾಯಿ ಮಾಜಿ ಸಚಿವೆ ಮೋಟಮ್ಮ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಮೂವರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಅವರನ್ನು ಹತ್ತಿರಕ್ಕೂ ಸೇರಿಸಿಕೊಳ್ಳದೆ ಶಾಸಕಿ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.
‘ಸಂಘ ಪರಿವಾರದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಜನಪ್ರತಿನಿಧಿಗಳು ತೆರಳಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಫರ್ಮಾನು ಹೊರಡಿಸಿದ್ದಾರೆ. ಯಾರ ಮಾತಿಗೂ ಬೆಲೆ ನೀಡದ ಶಾಸಕಿ ನಯನಾ ಮೋಟಮ್ಮ ಸಂಘ ಪರಿವಾರದ ಹಿಂದೂ ಮಹಾ ರ‍್ಯಾಲಿಗೆ ಕೇಸರಿ ಶಾಲು ಧರಿಸಿ ಮಂದಿ ಹಿಂಬಾಲಕರೊಂದಿಗೆ ಹೋಗಿದ್ದಾರೆ. ಭಾಷಣದಲ್ಲಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ, ಎಸ್‌ಡಿಪಿಐ ಅಥವಾ ಬಿಎಸ್‌ಪಿ ಪಕ್ಷಕ್ಕೆ ಸೇರುವ ಮುನ್ಸೂಚನೆ ನೀಡಿದ್ದಾರೆ. ಅವರು ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರಿಗೆ ಬಿಎಸ್ಪಿಗೆ ಸೇರ್ಪಡೆಯಾಗಲು ಅವಕಾಶವಿಲ್ಲ’ ಎಂದು ತಿಳಿಸಿದರು.
‘ಗಣಪತಿ ಪ್ರತಿಷ್ಠಾಪನೆಗಾಗಿ ಕಾರ್ಯಕ್ರಮಕ್ಕೆ ಶಾಸಕಿ ಹೋಗಿದ್ದರೆ ಯಾರು ಪ್ರಶ್ನೆ ಮಾಡುತ್ತಿರಲಿಲ್ಲ. ಅವರು ಹೋಗಿದ್ದ ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಗಣಪತಿ ಪ್ರತಿಷ್ಠಾಪನೆ ವಿಚಾರವೇ ಪ್ರಸ್ತಾಪವಾಗಲಿಲ್ಲ. ಹಿಂದೂವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಿದ್ದಾಂತವನ್ನು ವಿರೋಧಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಶಾಸಕಿ ನಯನಾ ಮೋಟಮ್ಮ ಅವರ ಮೂರ್ಖತನದ ಪರಮಾವಧಿಯಾಗಿದೆ. ಇಂತಹ ಶಾಸಕರನ್ನು ಚುನಾಯಿಸಿರುವ ಮೂಡಿಗೆರೆ ಕ್ಷೇತ್ರದ ಜನ ಪಶ್ಚತಾಪ ಪಡುವಂತಾಗಿದೆ. ಸಂವಿಧಾನಕ್ಕೆ ಬೆಲೆ ನೀಡದೆ ಸಂಘ ಪರಿವಾರದ ರ‍್ಯಾಲಿಯಲ್ಲಿ ಭಾಗವಹಿಸಿರುವ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
‘ಲಾಂಛನ ಬಿಡುಗಡೆಯ ನಾಟಕ’:
‘ಗಣಪತಿ ಸಮಿತಿ ಹೆಸರಿನಲ್ಲಿ ಕಳೆದ ವಾರ ಅಡ್ಯಂತಾಯ ರಂಗಮಂದಿರದಲ್ಲಿ ಹಿಂದೂ ಮಹಾ ರ‍್ಯಾಲಿ ಆಯೋಜಿಸಿದ್ದರು. ಅದೇ ಸ್ಥಳದಲ್ಲಿ ಅಕ್ರಮವಾಗಿ ಭಗವಾಧ್ವಜ ಸ್ಥಂಭ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದರು. ಸಂಘ ಪರಿವಾರದ ಒಳಸಂಚು ತಿಳಿದ ದಲಿತ ಯುವಕರು ಕೂಡಲೇ ಪೊಲೀಸರಿಗೆ ಮನವಿ ನೀಡಿ ಅಕ್ರಮ ಧ್ವಜಸ್ಥಂಭ ನಿರ್ಮಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು. ಆ ಮನವಿಯಂತೆ ಎಸ್ಪಿ ವಿಕ್ರಂ ಅಮಾಟೆ ಅವರು ಅವಕಾಶ ನೀಡದಿದ್ದರಿಂದ ನಿಗದಿಯಾಗಿದ್ದ ಧ್ವಜಸ್ಥಂಭ ಶಂಕುಸ್ಥಾಪನೆ ಕೈಬಿಟ್ಟು ನಂತರ ಲಾಂಛನ ಬಿಡುಗಡೆ ಎಂಬ ನಾಟಕ ಆಡಿದ್ದಾರೆ’ ಎಂದು ಯು.ಬಿ.ಮಂಜಯ್ಯ ಹೇಳಿದರು. ‘ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಕ್ರಿಮಿನಲ್ ಪ್ರಕರಣ ಇರುವ ಪ್ರಮೋದ್ ಮುತಾಲಿಕ್ ಅವರನ್ನು ಕರೆತಂದು ಕಾರ್ಯಕ್ರಮ ನಡೆಸಿದ್ದಾರೆ. ಇದು ಸಂವಿಧಾನ ವಿರೋಧಿ ಕಾರ್ಯಕ್ರಮ' ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.