
ಮೂಡಿಗೆರೆ: ‘ರಾಜ್ಯದಲ್ಲಿ ಕಾಂಗ್ರೆಸ್ ಜನವಿರೋಧಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಉಳಿಗಾಲವಿಲ್ಲ’ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಪಟ್ಟಣದ ರೈತಭವನಲ್ಲಿ ಮಂಗಳವಾರ ಟಿಎಪಿಸಿಎಂಎಸ್‌ನ ಮತದಾರರು, ಚುನಾಯಿತ ಪ್ರತಿನಿಧಿಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತದಿಂದ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಜನ ಸೋಲಿಸಲು ಆರಂಭಿಸಿದ್ದಾರೆ. ಬಹು ನಿರೀಕ್ಷೆಯಿಂದ ರಾಜ್ಯದ ಜನರು ಕಾಂಗ್ರೆಸ್‌ಗೆ ಆಡಳಿತ ಕೊಟ್ಟಿದ್ದಾರೆ. ಆದರೆ ಅಭಿವೃದ್ಧಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ಸರ್ಕಾರಕ್ಕೆ ಬಂದೊದಗಿದೆ. ಇದರಿಂದ ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೋಗೆಯಲು ಶಪಥ ಮಾಡಿದ್ದಾರೆ. ಟಿಎಪಿಸಿಎಂಸ್ ಚುನಾವಣೆಯಲ್ಲಿ ಗೆದ್ದ ನಿರ್ದೇಶಕರು ಜನಪರವಾದ ಕಾರ್ಯ ಮಾಡಬೇಕು' ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, 'ಗೃಹಜ್ಯೋತಿ ಹಣವನ್ನು ಲೂಟಿ ಹೊಡೆಯಲು ಹೋಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸಿಕ್ಕಿಬಿದ್ದಿದ್ದಾರೆ. ರಾಜ್ಯದ ಜನರ ತೆರಿಗೆ ಹಣವನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಎಂಬುದನ್ನು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ, 'ಕೃಷಿ ಪತ್ತಿನ ಸಂಘಗಳು ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಕಾಫಿ ಕಲ್ಪವೃಕ್ಷವಾಗಿ ಪರಿವರ್ತನೆಗೊಳ್ಳಲಿದೆ. ಗುಣಮಟ್ಟದ ಕಾಫಿಗೆ ಆದ್ಯತೆ ನೀಡಬೇಕು. ಬೇರೆ ರಾಜ್ಯದಲ್ಲಿ ಇಲ್ಲದ ಸರ್ಫೇಸಿ ನಮ್ಮ ರಾಜ್ಯದಲ್ಲಿ ಏಕಿದೆ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದನ್ನು ಬಗೆಹರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ' ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್‌ಶೆಟ್ಟಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ಗೌಡ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಜಿ.ಕೆ.ದಿವಾಕರ್, ನಿರ್ದೇಶಕಿ ಎ.ಕೆ.ಭಾರತೀ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ಉಪಾಧ್ಯಕ್ಷ ಕೆ.ಬಿ.ಗಣೇಶ್, ಮುಖಂಡರಾದ ಜ್ವಾಲನಯ್ಯ ಕಳಸ, ಎಂ.ಆರ್. ಜಗದೀಶ್, ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಬಿ.ಎನ್.ಜಯಂತ್, ಮನೋಜ್ ಹಳೆಕೋಟೆ, ಡಿ.ಬಿ.ಅಶೋಕ್, ಎಂ.ಸಿ.ಹೂವಪ್ಪ ಸೇರಿ ಬಿಜೆಪಿ, ಜೆಡಿಎಸ್ ಮುಖಂಡರು, ಟಿಎಪಿಸಿಎಂಎಸ್ ನಿರ್ದೇಶಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.