ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಕೈಬಲಪಡಿಸುವೆ: ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:31 IST
Last Updated 26 ಅಕ್ಟೋಬರ್ 2025, 4:31 IST
ನರಸಿಂಹರಾಜಪುರದ ತಾಲ್ಲೂಕು ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ನೂತನ ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ಪಕ್ಷದಿಂದ ಅಭಿನಂದಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ, ಗೇರುಬೈಲು ನಟರಾಜ್ ಭಾಗವಹಿಸಿದ್ದರು
ನರಸಿಂಹರಾಜಪುರದ ತಾಲ್ಲೂಕು ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ನೂತನ ವಿಧಾನಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ಪಕ್ಷದಿಂದ ಅಭಿನಂದಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ, ಗೇರುಬೈಲು ನಟರಾಜ್ ಭಾಗವಹಿಸಿದ್ದರು   

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರೊಂದಿಗೆ ಸೇರಿ ಕಾರ್ಯ ನಿರ್ವಹಿಸಲಾಗುವುದು ಎಂದು ನೂತನ ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ ಹೇಳಿದರು.

ಪಟ್ಟಣದ ತಾಲ್ಲೂಕು ಕಾಂಗ್ರೆಸ್ ಕಚೇರಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯಯಾಗಿ ನೇಮಕವಾದ ಮೇಲೆ ಚಿಕ್ಕಮಗಳೂರು ಜಿಲ್ಲೆಯನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ಚಿಕ್ಕಮಗಳೂರು ಅಥವಾ ಶೃಂಗೇರಿಯಲ್ಲಿ ವಿಧಾನಪರಿಷತ್ ಸದಸ್ಯರ ಕಚೇರಿ ಆರಂಭಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ನಮ್ಮ ತಂದೆ ಬೇಗಾನೆ ರಾಮಯ್ಯ ಅವರಿಗೆ ಶೃಂಗೇರಿ ಜನ್ಮಭೂಮಿಯಾದರೆ, ನರಸಿಂಹರಾಜಪುರ ಕರ್ಮಭೂಮಿಯಾಗಿದ್ದು ವಕೀಲ ವೃತ್ತಿ ಇಲ್ಲಿಂದಲೇ ಆರಂಭಿಸಿ ಶಾಸಕರಾಗಿದ್ದರು ಎಂದರು.

ADVERTISEMENT

ನರಸಿಂಹರಾಜಪುರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದೇನೆ. ಕೃಷ್ಣ ಫೌಂಡೇಶನ್ ಮೂಲಕ ತಾಲ್ಲೂಕಿನಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಸಲಾಗಿತ್ತು. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪರಿಕರ ವಿತರಿಸುವ ಕಾರ್ಯ ಮಾಡಲಾಗಿತ್ತು. ಪ್ರಸ್ತುತ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ಲಭಿಸಿದೆ. ಕ್ಷೇತ್ರದಲ್ಲಿರುವ ಅರಣ್ಯ ಒತ್ತುವರಿ,ಅಡಿಕೆ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕರೊಂದಿಗೆ ಸೇರಿ ಧ್ವನಿ ಎತ್ತಲಾಗುವುದು. ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ ಅವರು ವಿದೇಶದಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದ ಕ್ಷೇತ್ರದ ಹಲವರನ್ನು ಮರಳಿ ಭಾರತಕ್ಕೆ ಕರೆತರುವಲ್ಲಿ ಶ್ರಮಿಸಿದ್ದಾರೆ. ವೈಯಕ್ತಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಪ್ರಸ್ತುತ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸುವರ್ಣ ಕಾಲ ಬಂದಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ರಚನೆಗೆ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಎಂ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ,ಅಂಶುಮಂತ್ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ಆರತಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಗಿದೆ. ಜಿಲ್ಲೆಯನ್ನು ನೋಡಲ್ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿರುವ ಆರತಿಕೃಷ್ಣ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು. ಏತನೀರಾವರಿ ಯೋಜನೆ, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಮುಖಂಡರಾದ ಪಿ.ಆರ್.ಸದಾಶಿವ, ಜುಬೇದಾ, ಸಾಜು, ಮೀನಾಕ್ಷಿ ಕಾಂತರಾಜ್. ಎಚ್.ಎಂ.ಶಿವಣ್ಣ, ಯುವ ಕಾಂಗ್ರೆಸ್ ಘಟಕದ ತಾಲ್ಲೂಕು ಅಧ್ಯಕ್ಷ ರತನ್ ಗೌಡ ಮಾತನಾಡಿದರು. ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್.ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್, ಅಬೂಬಕರ್, ರಘುವೀರ್,ಸುನಿಲ್ ಕುಮಾರ್, ಉಪೇಂದ್ರ, ದೇವಂತ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.