ADVERTISEMENT

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನಿರ್ಲಕ್ಷ್ಯ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 13:25 IST
Last Updated 12 ಸೆಪ್ಟೆಂಬರ್ 2019, 13:25 IST
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಡಾ.ಡಿ.ಎಲ್.ವಿಜಯಕುಮಾರ್, ಗಾಯತ್ರಿ ಶಾಂತೇಗೌಡ, ಎ.ಎನ್.ಮಹೇಶ್ ಇದ್ದಾರೆ.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಡಾ.ಡಿ.ಎಲ್.ವಿಜಯಕುಮಾರ್, ಗಾಯತ್ರಿ ಶಾಂತೇಗೌಡ, ಎ.ಎನ್.ಮಹೇಶ್ ಇದ್ದಾರೆ.   

ಚಿಕ್ಕಮಗಳೂರು: ರಾಜ್ಯದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಸಮೀಪದ ಮಹಾತ್ಮ ಗಾಂಧಿ ಉದ್ಯಾನದಲ್ಲಿನ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪಕ್ಷದ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನೆರೆ ಸಂತ್ರಸ್ತರ ಕಣ್ಣಿರು ಒರೆಸುತ್ತಿಲ್ಲ. ದ್ವೇಷ ರಾಜಕೀಯ ಮಾಡುವುದರಲ್ಲಿ ನಿರತವಾಗಿದೆ. ಕೇಂದ್ರದ ಇಬ್ಬರು ಸಚಿವರು ರಾಜ್ಯದ ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವರೆಗೆ ಅನುದಾನ ಘೋಷಣೆ ಮಾಡಿಲ್ಲ. ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಅನುದಾನ ಮಂಜೂರು ಮಾಡಿಸಲು ವಿಫಲರಾಗಿದ್ದಾರೆ’ ಎಂದರು ದೂರಿದರು.

ADVERTISEMENT

2009ರಲ್ಲಿ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಚಂದ್ರಯಾನ–2 ಘೋಷಣೆ ಮಾಡಿದ್ದರು. ಅದಕ್ಕೆ ಪೂರಕವಾದ ಅನುದಾನ ನೀಡಿದ್ದರು. ಚಂದ್ರಯಾನ–2 ವೀಕ್ಷಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ನೆರೆ ಪರಿಹಾರ ಅನುದಾನ ಘೋಷಣೆ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ, ಬಾಂಬೆಯಲ್ಲಿ ನಷ್ಟದಲ್ಲಿದ್ದ ಖಾಸಗಿ ಸಂಸ್ಥೆಗೆ ₹7 ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ದೇಗುಲಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸೌಜನ್ಯಕ್ಕಾದರೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಆರ್ಥಿಕ ತಜ್ಞರಾಗಿದ್ದ ಮನಮೋಹನ ಸಿಂಗ್ ಪ್ರಧಾನಿಯಾಗಿ ಹತ್ತು ವರ್ಷ ಆಡಳಿತ ನಡೆಸಿದರು. ಜಿಡಿಪಿ ಮೌಲ್ಯ ಅಭಿವೃದ್ಧಿಯಾಗಿತ್ತು. ಆದರೆ, ಮೋದಿ ಆಡಳಿತದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಜಿಡಿಪಿ ಮೌಲ್ಯ ಕುಸಿಯುತ್ತಿದೆ. ಮೋದಿ ಅವರು ಮನಮೋಹನ ಸಿಂಗ್ ಅವರ ಸಲಹೆ ಪಡೆಯಬೇಕು‘ ಎಂದರು.

ನೆರೆ ಸಂತ್ರಸ್ತರು ಮನೆ, ಜಮೀನು, ಮೂಲ ದಾಖಲೆಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅವರ ಮಕ್ಕಳು ಶಾಲೆಗೆ ತೆರಳಲು ಪುಸ್ತಕ, ಬ್ಯಾಗ್‌ಗಲ್ಲಿದೆ ಪರದಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಕಾರ್ಯಕರ್ತರಾದ ಹಿರೇಮಗಳೂರು ಪುಟ್ಟಸ್ವಾಮಿ, ರಾಮಚಂದ್ರ, ರಸೂಲ್ ಖಾನ್, ರೂಬೆನ್ ಮೊಸೆಸ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.