ಹಿರೀಕೆರೆ
ಕೊಪ್ಪ: ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಕೆಲವೆಡೆ ಕಲುಷಿತ ನೀರು ಪೂರೈಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
'ಪಟ್ಟಣದ ಹಲವೆಡೆ ವಾಸನೆಯುಕ್ತ ಕೊಳಕು ನೀರು ಸರಬರಾಜು ಆಗಿದೆ. ಈ ಬಗ್ಗೆ ದೂರು ನೀಡಲಾಗಿದೆ. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೂ ಕಳುಹಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವು ಈ ನೀರು ಕುಡಿಯಲು’ತೃಪ್ತಿಕರವಾಗಿಲ್ಲ’ ಎಂದು ವರದಿ ನೀಡಿದೆ ಎಂದು 'ಗಾರ್ಬೇಜ್ ಕೊಪ್ಪ ಟು ಗಾರ್ಡನ್ ಕೊಪ್ಪ' ತಂಡದ ಸದಸ್ಯ ಅಶೋಕ್ ಸಿಗದಾಳು ಹೇಳಿದರು.
ಕೊಪ್ಪ ಪಟ್ಟಣಕ್ಕೆ ಜನವರಿಯಿಂದ ಜೂನ್‌ವರೆಗೆ ತುಂಗಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗುತ್ತದೆ. ಮಳೆಗಾಲ ಆರಂಭವಾದ ನಂತರ ಜುಲೈನಿಂದ ಡಿಸೆಂಬರ್‌ವರೆಗೆ ಹಿರೀಕೆರೆಯಿಂದ ನೀರು ಪೂರೈಸಲಾಗುತ್ತದೆ. ಆದರೆ, ಈ ಬಾರಿ ಮೇ ತಿಂಗಳಲ್ಲೇ ಹಿರೇಕೆರೆಯಿಂದ ನೀರು ಪೂರೈಸಿದ್ದರಿಂದ ಕಲುಷಿತ ನೀರು ಸರಬರಾಜು ಆಗಿರಬೇಕು. ಪಟ್ಟಣ ಪಂಚಾಯಿತಿ ನೀರಿನ ಗುಣಮಟ್ಟ ಪರೀಕ್ಷಿಸದೆ ಜನರಿಗೆ ಕುಡಿಯಲು ಪೂರೈಸಿರುವುದು ತಪ್ಪು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಚಿಕ್ಕಮಗಳೂರು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಿಂದ ನೀರು ಪರೀಕ್ಷೆ ಫಲಿತಾಂಶ ಮೇ 9ರಂದು ಬಂದಿದ್ದು, ಈ ವರದಿಯಲ್ಲಿ ಉಲ್ಲೇಖಸಿರುವಂತೆ ಹಿರೀಕೆರೆ ಶುದ್ಧೀಕರಣ ಘಟಕದ ನೀರು, ಮುಖ್ಯ ರಸ್ತೆ ವಾಟರ್ ಟ್ಯಾಂಕ್ ವೃತ್ತದಲ್ಲಿರುವ ಓವರ್ ಹೆಡ್ ಟ್ಯಾಂಕ್, ಬಸ್ ನಿಲ್ದಾಣದ ಆವರಣದಲ್ಲಿರುವ ಓವರ್ ಹೆಡ್ ಟ್ಯಾಂಕ್, ಸರ್ಕಾರಿ ಆಸ್ಪತ್ರೆಯ ಟ್ಯಾಂಕ್ ನೀರು ಕುಡಿಯಲು ತೃಪ್ತಿಕರವಾಗಿಲ್ಲ ಎಂದು ಹೇಳಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಿದೆ.
ಕಲುಷಿತ ನೀರು ಪೂರೈಕೆಯಾಗಿರುವುದರ ಬೆನ್ನಲ್ಲೇ, ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಎಂ.ಎಸ್.ದ್ಯಾವೇಗೌಡ ಸರ್ಕಲ್‌ನಲ್ಲಿರುವ ಕ್ಯಾಂಟೀನ್ ಮಾಲೀಕರೊಬ್ಬರು ಹೇಳಿದರು.
‘ಸದ್ಯ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಳೆ ಬಂದು ವಿದ್ಯುತ್ ಸಮಸ್ಯೆ ಉಂಟಾಗಿ ಮೋಟರ್ ಚಾಲನೆ ಮಾಡಲು ಸಾಧ್ಯವಾಗದೆ ಅಡಚಣೆ ಉಂಟಾಗಿತ್ತು. ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದರಿಂದ ನೀರಿನ ಪೂರೈಕೆಯಲ್ಲಿ ಒಂದು ದಿನ ಮಾತ್ರ ವ್ಯತ್ಯಾಸವಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮೂಲಗಳು ತಿಳಿಸಿವೆ.
‘ನೀರು ಶುದ್ಧೀಕರಣಕ್ಕೆ ಬಳಸುವ ಆಲಂ ಕೊರತೆಯಾಗಿಲ್ಲ' ಎಂದು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿ ಭಾಸ್ಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.