
ಮೂಡಿಗೆರೆ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ರಾಣಿಝರಿ ವ್ಯೂ ಪಾಯಿಂಟ್ ಭೇಟಿಗೆ ಅರಣ್ಯ ಇಲಾಖೆ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ನಿರ್ಧಾರವನ್ನು ವಿರೋಧಿಸಿ ಸ್ಥಳೀಯರು ರಾಣಿಝರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಮಾಹಿತಿ ತಿಳಿದು ಉಪ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ‘ಮೇಲಧಿಕಾರಿಗಳ ನಿರ್ದೇಶನದಂತೆ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ಸಮಜಾಯಿಷಿ ನೀಡಿದ ಅವರು, ಗ್ರಾಮಸ್ಥರ ಆಕ್ಷೇಪಣೆ ಹಾಗೂ ಮನವಿಯನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದರು.
‘ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ ಈಗಾಗಲೇ ಬಂಡಾಜೆ ಫಾಲ್ಸ್‌ಗೆ ತಲಾ ₹300 ಶುಲ್ಕ ವಿಧಿಸಲಾಗುತ್ತಿದೆ. ಇದರ ನಡುವೆ ರಾಣಿಝರಿ ವ್ಯೂ ಪಾಯಿಂಟ್‌ಗೂ ಟಿಕೆಟ್ ನಿಗದಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ’ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಆರೋಪಿಸಿದರು.
ಸುಂಕಸಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರ, ‘ರಾಣಿಝರಿ ನಮ್ಮ ಗ್ರಾಮದ ನೈಸರ್ಗಿಕ ಆಸ್ತಿ. ಜನರ ಅಭಿಪ್ರಾಯ ಕೇಳದೆ ತೆಗೆದುಕೊಂಡ ನಿರ್ಧಾರ ಸರಿಯಲ್ಲ. ಅರಣ್ಯ ಇಲಾಖೆ ಕೂಡಲೇ ಟಿಕೆಟ್ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ರವಿ ಮಾತನಾಡಿ, ‘ಪ್ರಕೃತಿಯನ್ನು ವ್ಯಾಪಾರೀಕರಣಗೊಳಿಸುವ ಜನವಿರೋಧಿ ನೀತಿ ಇದಾಗಿದೆ. ಟಿಕೆಟ್ ವ್ಯವಸ್ಥೆ ಜಾರಿಗೊಳಿಸುವ ಪೂರ್ವ ಸ್ಥಳೀಯ ನಿವಾಸಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸ್ಥಳೀಯರಿಲ್ಲದೆ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಈ ಕ್ರಮ ಕೈಬಿಟ್ಟು, ಮುಕ್ತ ಪ್ರವೇಶ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.
ಪ್ರತಿಭಟನೆಯಲ್ಲಿ ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ ಹಾಗೂ ಬಲಿಗೆ ಗ್ರಾಮಗಳ 300ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು. ಟಿಕೆಟ್ ವ್ಯವಸ್ಥೆಯನ್ನು ಹಿಂಪಡೆಯದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ಒಕ್ಕೊರಲಿನಿಂದ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.