ADVERTISEMENT

ಕೋವಿಡ್‌: ಸಮಗ್ರ ಪ್ಯಾಕೇಜ್‌ಗೆ ಆಗ್ರಹ

ಜನಾಗ್ರಹ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 22:11 IST
Last Updated 22 ಜೂನ್ 2021, 22:11 IST
ಚಿಕ್ಕಮಗಳೂರಿನಲ್ಲಿ ಜನಾಗ್ರಹ ಆಂದೋಲನ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಜನಾಗ್ರಹ ಆಂದೋಲನ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು.   

ಚಿಕ್ಕಮಗಳೂರು: ಕೋವಿಡ್‌ ತಲ್ಲಣ, ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಅರೆಬರೆ ನೆರವು ನೀಡುವುದು ಬಿಟ್ಟು, ಸಮಗ್ರ ಪ್ಯಾಕೇಜ್‌ ಘೋಷಿಸಬೇಕು. ಬಡ ಕುಟುಂಬಗಳಿಗೆ ₹ 5000 ಪರಿಹಾರ ನೀಡಬೇಕು ಎಂದು ಜನಾಗ್ರಹ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಮೀಪದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯ ಹಾಗೂ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಕೇರ್‌ ಕೇಂದ್ರಗಳನ್ನು ಹೆಚ್ಚಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್‌ಗೆ ಉಚಿತ ಚಿಕಿತ್ಸೆ ನೀಡಬೇಕು. ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡಬೇಕು. ಕೋವಿಡ್‌ನಿಂದಾಗಿ ಮನೆಯ ಯಜಮಾನ ಮೃತಪಟ್ಟಿದ್ದರೆ, ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. ಬಿತ್ತನೆಬೀಜ, ರಸಗೊಬ್ಬರಗಳಿಗೆ ವಿಶೇಷ ಸಹಾಯಧನ ಘೋಷಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಕೋವಿಡ್‌ ಚಿಕಿತ್ಸೆಗೆಗಾಗಿ ಜನರು ಸಾಲ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸರ್ಕಾರವು ಸಮಸ್ಯೆಯ ಅಗಾಧತೆ ಅರ್ಥ ಮಾಡಿಕೊಳ್ಳಬೇಕು. ಕೇರಳ ಸರ್ಕಾರ 3.6 ಕೋಟಿ ಜನಸಂಖ್ಯೆಗೆ ₹20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರ್ಕಾರ ರಾಜ್ಯದ 6.8 ಕೋಟಿ ಜನಸಂಖ್ಯೆಗೆ ಕನಿಷ್ಠ ₹ 2 ಸಾವಿರ ಕೋಟಿ ನೆರವನ್ನೂ ಘೋಷಿಸಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಘಟಕದ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಕರ್ಫ್ಯೂ ಜಾರಿಗೊಳಿಸಿ, ಪ್ರತಿಭಟನೆ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಜನಾಗ್ರಹ ಆಂದೋಲನ ಸಮಿತಿ ಸಂಚಾಲಕ ಗೌಸ್‌ಮೊಹಿಯುದ್ದೀನ್ ಮಾತನಾಡಿ, ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದೆ. ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನಿಡಲಾಗಿದೆ. ಮೊಬೈಲ್, ಚಪ್ಪಲಿ, ಬಟ್ಟೆ ಮಾರಾಟಕ್ಕೂ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಹಸಿರುಸೇನೆ–ರೈತ ಸಂಘದ ಜಿಲ್ಲಾಘಟಕದ ಡಿ.ಆರ್.ದುಗ್ಗಪ್ಪಗೌಡ, ಮುಖಂಡರಾದ ಚಂದ್ರಪ್ಪ, ಯೂಸೂಫ್‌ಹಾಜಿ, ಅಜ್ಮತ್‌ಪಾಶ, ಕೃಷ್ಣಮೂರ್ತಿ, ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.