ADVERTISEMENT

69 ಮಂದಿಗೆ ಕೋವಿಡ್‌: ನವೋದಯ ವಿದ್ಯಾಲಯ ಸೀಲ್‌ಡೌನ್‌

59 ವಿದ್ಯಾರ್ಥಿಗಳಿಗೆ ಸೇರಿದಂತೆ 69 ಮಂದಿಗೆ ಕೋವಿಡ್‌– ಪೋಷಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:50 IST
Last Updated 6 ಡಿಸೆಂಬರ್ 2021, 4:50 IST
ಬಾಳೆಹೊನ್ನೂರು ಸಮೀಪದ ಸೀಗೋಡಿನ ಜವಾಹರ ನವೋದಯ ವಿದ್ಯಾಲಯಕ್ಕೆ ಕೊಪ್ಪ ತಹಶೀಲ್ದಾರ್ ಎಚ್.ಎಸ್. ಪರಮೇಶ್ವರ್, ಆಹಾರ ನಿರೀಕ್ಷಕ ವಿರೂಪಾಕ್ಷ, ಗ್ರಾಮ ಲೆಕ್ಕಿಗ ಕೆ.ಎಸ್.ಸೀತಾರಾಮ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ವಿದ್ಯಾಲಯಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮುಖಂಡರಾದ ಅರುಣ್ ಕುಮಾರ್, ವೆನಿಲ್ಲಾ ಭಾಸ್ಕರ್, ಸಂತೋಷ್ ಅರೇನೂರು, ಮಣಿಕಂಠನ್ ಕಂದಸ್ವಾಮಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಬಾಳೆಹೊನ್ನೂರು ಸಮೀಪದ ಸೀಗೋಡಿನ ಜವಾಹರ ನವೋದಯ ವಿದ್ಯಾಲಯಕ್ಕೆ ಕೊಪ್ಪ ತಹಶೀಲ್ದಾರ್ ಎಚ್.ಎಸ್. ಪರಮೇಶ್ವರ್, ಆಹಾರ ನಿರೀಕ್ಷಕ ವಿರೂಪಾಕ್ಷ, ಗ್ರಾಮ ಲೆಕ್ಕಿಗ ಕೆ.ಎಸ್.ಸೀತಾರಾಮ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ವಿದ್ಯಾಲಯಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮುಖಂಡರಾದ ಅರುಣ್ ಕುಮಾರ್, ವೆನಿಲ್ಲಾ ಭಾಸ್ಕರ್, ಸಂತೋಷ್ ಅರೇನೂರು, ಮಣಿಕಂಠನ್ ಕಂದಸ್ವಾಮಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.   

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಸೀಗೋಡಿನ ಜವಾಹರ ನವೋದಯ ವಿದ್ಯಾಲಯದಲ್ಲಿ 59 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 69 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಹೀಗಾಗಿ, ವಿದ್ಯಾಲಯದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳ, ಸಿಬ್ಬಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸ ಲಾಗಿತ್ತು. ಭಾನುವಾರ ಸಂಜೆಯ ವೇಳೆಗೆ 59 ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ 9 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.

‘ವಿದ್ಯಾಲಯದಲ್ಲಿ ಶೈಕ್ಷಣಿಕ ಚಟು ವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಸೋಮವಾರ 12ನೇ ತರಗತಿಯ ಪರೀಕ್ಷೆ ನಡೆಯಲಿದೆ. 12ನೇ ತರಗತಿಯ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಪರಿಸ್ಥಿತಿ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

‘ಸೋಂಕು ಲಕ್ಷಣ ಇರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ. ವಿದ್ಯಾ ಲಯಕ್ಕೆ ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುಧೀಂದ್ರ, ಬಾಳೆಹೊನ್ನೂರಿನ ಡಾ.ಪ್ರವೀಣ್
ಭೇಟಿ ನೀಡಿದ್ದಾರೆ.

‘ಬಹುತೇಕರಲ್ಲಿ ಶೀತ, ಕೆಮ್ಮ ಕಾಣಿಸಿ ಕೊಂಡಿದೆ. ಯಾರಿಗೂ ಉಸಿರಾಟದ ತೊಂದರೆ ಕಂಡು ಬಂದಿಲ್ಲ. ಸಿಬ್ಬಂದಿ ಯಲ್ಲಿ ಒಬ್ಬರಿಗೆ ಮಾತ್ರ ಜ್ವರ, ಮೈಕೈ ನೋವು ಕಾಣಿಸಿಕೊಂಡಿದೆ. 10 ದಿನಗಳ ಕಾಲ ಸೋಂಕಿತರನ್ನು ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಇದೀಗ ಇಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ 13ರಷ್ಟಿದೆ. ಅದು ಶೇ 5ರ ಕೆಳಗೆ ಬರಬೇಕು. ಸೋಂಕಿತರು ಸಂಪೂರ್ಣವಾಗಿ ಗುಣಮುಖ ವಾಗುವವರೆಗೂ ಎಚ್ಚರಿಕೆಯಿಂದ ದಿನನಿತ್ಯ ಪರೀಕ್ಷಿಸಲಾಗುತ್ತದೆ’ ಎಂದು ಡಾ.ಪ್ರವೀಣ್ ಹೇಳಿದರು.

ಕೊಪ್ಪ ತಹಶೀಲ್ದಾರ್ ಎಚ್.ಎಸ್.ಪರಮೇಶ್ವರ್, ಆಹಾರ ನಿರೀಕ್ಷಕ ವಿರೂಪಾಕ್ಷ, ಹೇರೂರು ಗ್ರಾಮದ ಗ್ರಾಮ ಲೆಕ್ಕಿಗ ಕೆ.ಎಸ್.ಸೀತಾರಾಮ ಭೇಟಿ ನೀಡಿ ವಿದ್ಯಾಲಯದ ಅಡುಗೆ ಮನೆ, ಪರಿಸರವನ್ನು ಪರಿಶೀಲಿಸಿದರು.

ವಿದ್ಯಾಲಯದ ಇಡೀ ಪರಿಸರವನ್ನು ಸ್ಯಾನಿಟೈಸ್ ಮಾಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಪೋಷಕರು ಆತಂಕದಲ್ಲಿ ವಿದ್ಯಾಲಯಕ್ಕೆ ಬಂದು ಗೇಟಿನ ಹೊರಗಡೆಯಿಂದಲೇ ಮಕ್ಕಳ ಆರೋಗ್ಯ ವಿಚಾರಿಸುತ್ತಿದ್ದುದು ಕಂಡು ಬಂತು. ಹಲವು ಪೋಷಕರು ಮಕ್ಕಳನ್ನು ಮನೆಗೆ ಕರೆದೊಯ್ಯುವ ಇಂಗಿತ ವ್ಯಕ್ತಪಡಿಸಿದ್ದು, ವೈದ್ಯರು ಅವಕಾಶ ನೀಡಿಲ್ಲ.

ಬಾಳೆಹೊನ್ನೂರಿನ ಆರೋಗ್ಯ ನಿರೀಕ್ಷಕ ಭಗವಾನ್, ನರ್ಸ್‌ಗಳು ಮೊಕ್ಕಾಂ ಹೂಡಿದ್ದಾರೆ. ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್ ಸಜ್ಜಾಗಿ ಇಡಲಾಗಿದೆ. ಡಿಎಚ್‍ಒ ಡಾ.ಉಮೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರ್ ಪ್ರಸಾದ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅರುಣ್ ಕುಮಾರ್, ಹೋಬಳಿ ಅಧ್ಯಕ್ಷ ಸಂತೋಷ್ ಅರೇನೂರು, ವೆನಿಲ್ಲಾ ಭಾಸ್ಕರ್, ಪ್ರಭಾಕರ್ ಪ್ರಣಸ್ವಿ, ಮಣಿಕಂಠನ್ ಕಂದಸ್ವಾಮಿ ವಿದ್ಯಾಲಯಕ್ಕೆ ಭೇಟಿ ನೀಡಿದರು.

ಆಮ್ಲಜನಕ ಸಾಂದ್ರಕ ಸಜ್ಜು; ಸೂಚನೆ

ಇಷ್ಟೊಂದು ಮಂದಿಗೆ ಕೋವಿಡ್‌ ದೃಢಪಟ್ಟಿರುವುದು ಆಶ್ಚರ್ಯ. ಒಂದು ವೇಳೆ ತುರ್ತು ಸ್ಥಿತಿ ಉಂಟಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಹತ್ತು ಆಮ್ಲಜನಕ ಸಾಂದ್ರಕ, ಪಲ್ಸ್ ಮೀಟರ್, ಪಿಪಿಇ ಕಿಟ್‌ಗಳನ್ನು ವಿದ್ಯಾಲಯದಲ್ಲಿ ತಂದು ಇರಿಸಲು ಸೂಚಿಸಲಾಗಿದೆ. ಯಾರಿಗೂ ಗಂಭೀರವಾದ ರೋಲಕ್ಷಣ ಕಂಡು ಬಂದಿಲ್ಲ. ಆದರೂ ಎಲ್ಲರನ್ನೂ ನಿಗಾವಹಿಸಿ ನೋಡಲಾಗುತ್ತದೆ ಎಂದು ಡಿ.ಎನ್.ಜೀವರಾಜ್ ತಿಳಿಸಿದರು.

‘ವಿದ್ಯಾಲಯದಲ್ಲೇ ಕ್ಲಿನಿಕ್‌ ಆರಂಭಿಸಲಾಗಿದೆ. ಸರ್ಕಾರದ ಕಡೆಯಿಂದ ಏನಾದರೂ ಅವಶ್ಯಕತೆ ಬಿದ್ದಲ್ಲಿ ಅದನ್ನು ತಕ್ಷಣ ನೀಡಲಾಗುತ್ತದೆ. ಇಲ್ಲಿಯ ಅಗತ್ಯತೆ ಕುರಿತು ಜಿಲ್ಲಾಧಿಕಾರಿ ಹಾಗೂ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.