ಚಿಕ್ಕಮಗಳೂರು: ‘ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಗೋಹತ್ಯೆ ನಡೆಯುತ್ತಿದೆ. ಪೊಲೀಸರು ಗೋಹಂತಕರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸವನ್ನು ಮಾಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ನಾವೇ ಈ ಕೆಲಸ ಮಾಡಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದರು.
ಹಿಂದೂ ಹಿತರಕ್ಷಣಾ ವೇದಿಕೆಯಿಂದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಗೋವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು. ಗೋಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದರೆ ಗೋರಕ್ಷಣೆ ರೀತಿಯ ಕಾರ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಮುಂದಾಗುವುದಿಲ್ಲ ಎಂದರು.
‘ಗೋಹಂತಕರಿಂದ ಮಾಮೂಲಿ ವಸೂಲಿ ಮಾಡಿ ಸುಮ್ಮನಾದರೆ ನಿಮ್ಮ ಹೆಂಡತಿ, ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ. ಗೋವುಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕು. ಹಂತಕರನ್ನು ನಿಗ್ರಹಿಸಬೇಕು’ ಎಂದು ಆಗ್ರಹಿಸಿದರು.
ಭಟ್ಕಳದಲ್ಲಿ ಗಬ್ಬದ ಹಸುವಿಗೆ ಚೂರಿ ಹಾಕಿದರೂ ಮುಖ್ಯಮಂತ್ರಿಗೆ ಸಂಕಟವಾಗಲಿಲ್ಲ. ಜಿಲ್ಲೆಯ ಕಡೂರಿನ ಕಲ್ಕೆರೆ, ಚೌಳಹಿರಿಯೂರು, ಕಳಸ, ಕೊಟ್ಟಿಗೆಹಾರ, ಶೃಂಗೇರಿ, ಚಿಕ್ಕಮಗಳೂರಿನಲ್ಲಿ ಅಕ್ರಮ ಗೋಸಾಗಣೆ, ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದನ್ನೆಲ್ಲ ಮಾಡಿದವರು ಬೇರೆ ಯಾರೂ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಾಂತಿಧೂತರು ಎಂದು ಕರೆಸಿಕೊಳ್ಳುವವರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ತಾಯಿಗೆ ಸಮಾನವಾದ ಗೋವಿನ ಮೇಲೆ ದಾಳಿಗಳು ನಡೆದಾಗ ಯಾವ ತ್ಯಾಗಕ್ಕಾದರೂ ಸಿದ್ಧರಿರಬೇಕು. ನಾವೂ ಸಹ ರಾಜೀನಾಮೆ ಕೊಟ್ಟು ಹೊರಬರಲು ಸಿದ್ಧರಿದ್ದೇವೆ’ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಹಿಂದೆ ಔರಂಗಜೇಬನ ಆಡಳಿತದಲ್ಲಿ ತುಘಲಕ್ ದರ್ಬಾರ್ ಇತ್ತು. ತಲೆಗಂದಾಯ ಕೊಟ್ಟರೆ ಮಾತ್ರ ಹಿಂದೂಗಳು ಬದುಕಲು ಅವಕಾಶವಿತ್ತು. ಅದೇ ರೀತಿ ಆಡಳಿತವನ್ನು ರಾಜ್ಯದಲ್ಲೂ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳಲು ಆಗದ ಸ್ಥಿತಿ ಬಂದಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರಿಕಾಂತ್ ಪೈ, ಬಜರಂಗದಳದ ಶ್ಯಾಮ್ ವಿ.ಗೌಡ, ರಂಗನಾಥ್ ಭಾಗವಹಿಸಿದ್ದರು.
ಗೋವುಗಳ ರಕ್ಷಣೆಗಾಗಿ ರಾಜೀನಾಮೆಗೂ ಸಿದ್ಧ: ಎಂ.ಕೆ.ಪ್ರಾಣೇಶ್ | ತುಘಲಕ್ ದರ್ಬಾರ್ ರೀತಿಯ ಆಡಳಿತ: ಕೋಟ ಶ್ರೀನಿವಾಸ ಪೂಜಾರಿ | ಗೋಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸಾವಿರಾರು ಜನರಿಂದ ಮೆರವಣಿಗೆ
ಚಿಕ್ಕಮಗಳೂರು ನಗರದ ಕತ್ರಿಮಾರಮ್ಮ ದೇವಸ್ಥಾನದ ಬಳಿಯಿಂದ ಸಾವಿರಾರು ಹಿಂದೂ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಹನುಮಂತಪ್ಪ ವೃತ್ತ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ತನಕ ಮೆರವಣಿಗೆ ನಡೆಸಲಾಯಿತು. ಹಸು ಮತ್ತು ಕರುವಿನ ಸ್ತಬ್ಧ ಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಹಸುವೊಂದನ್ನು ಆಜಾದ್ ಪಾರ್ಕ್ ವೃತ್ತಕ್ಕೆ ತಂದು ಪೂಜೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.