ADVERTISEMENT

ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಂಡಿತೆ?: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 5:07 IST
Last Updated 4 ಆಗಸ್ಟ್ 2022, 5:07 IST

ಚಿಕ್ಕಮಗಳೂರು: ‘ಮಳೆಯಿಂದಾಗಿ ರಾಜ್ಯದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಆಚರಿಸಿದ್ದು ಸರಿಯೇ? ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಂಡಿತೆ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಬದುಕಿನ ಸಾರ್ಥಕತೆ ಬೇರೆ. ಜನರು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಸಂಭ್ರಮ ಆಚರಿಸಬೇಕಿತ್ತೇ, ಬೇಡವೇ ಎಂಬುದನ್ನು ಆ ಪಕ್ಷ ಆಲೋಚಿಸಬೇಕಿತ್ತು’ ಎಂದು ಛೇಡಿಸಿದರು.

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ವರ್ಷ ತುಂಬಿತ್ತು. ಜುಲೈ 28ರಂದು ಜನೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು, ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆಯಾಗಿದ್ದರಿಂದ ಕಾರ್ಯಕ್ರಮ ಕೈಬಿಟ್ಟೆವು’ ಎಂದರು.

ADVERTISEMENT

‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಕೈಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅದು ಎಷ್ಟು ದಿನ ಇರುತ್ತದೆ ಕಾದು ನೋಡೋಣ’ ಎಂದು ಉತ್ತರಿಸಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಭೇಟಿ ನೀಡುವರು. ವಿಶೇಷ ಏನು ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಕಾರ್ಯಕರ್ತರು ಪಕ್ಷ ಬಿಟ್ಟು ಹೋಗಲ್ಲ. ತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ, ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ಕಾರ್ಯಕರ್ತರನ್ನು ಸಮಾಧಾನಪಡಿಸಿ ಜೋಡಿಸಿಕೊಳ್ಳುತ್ತೇವೆ’ ಎಂದರು.

‘ಪ್ರವೀಣ್‌ ಹತ್ಯೆ ಕೋಮುಗಲಭೆ ಹುಟ್ಟು ಹಾಕಲು ಮಾಡಿರುವ ಸಂಚು, ಮಸೂದ್‌ ಹತ್ಯೆ ಕೋಮು ಹಿಂಸೆಯಲ್ಲ ಎಂಬ ಮಾಹಿತಿ ಇದೆ. ಇನ್ನೊಂದು ಹತ್ಯೆಗೆ (ಪಾಝಿಲ್‌) ಸಂಬಂಧಿಸಿದಂತೆ ಅಂತೆಕಂತೆಗಳು ಹರಿದಾಡಿದವು. ಮುಖ್ಯಮಂತ್ರಿ ಸಭೆ ನಡೆಸಿ ಮಾಹಿತಿ ಕಲೆ ಹಾಕುವಂತೆ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದರು. ಕೋಮುಗಲಭೆಯಲ್ಲಿ ಹತ್ಯೆಯಾದವರಿಗೆ ಸರ್ಕಾರ ಪರಿಹಾರ ನೀಡುತ್ತೆ, ತಾರತಮ್ಯ ಮಾಡಲ್ಲ’ ಎಂದು ಉತ್ತರಿಸಿದರು.

‘ಪಿಎಫ್ಐ, ಎಸ್‌ಡಿಪಿಐ, ಕಾಂಗ್ರೆಸ್‌ನವರ ಟಾರ್ಗೆಟ್‌ ಆರ್‌ಎಸ್‌ಎಸ್‌. ರಾಜ್ಯದಲ್ಲಿ ಕೋಮು ಗಲಭೆ, ವೈಚಾರಿಕ ಕಾರಣಕ್ಕೆ ಹತ್ಯೆ ನಡೆದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಪ್ರಕರಣಗಳನ್ನು ವಾಪಸ್‌ ತೆಗೆದುಕೊಂಡಿದ್ದೇ ಕಾರಣ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.