ADVERTISEMENT

ಚಿಕ್ಕಮಗಳೂರು | ಕೋವಿಡ್‌–19 ಸೋಂಕಿನಿಂದ ಗುಣಮುಖರಾದ ಸಚಿವ ಸಿ.ಟಿ. ರವಿ

ಯೋಗಾಭ್ಯಾಸ, ಕಷಾಯ ಸೇವನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಸಿ.ಟಿ. ರವಿ
ಸಿ.ಟಿ. ರವಿ   

ಚಿಕ್ಕಮಗಳೂರು: ‘ಸೋಂಕಿನ ಲಕ್ಷಣಗಳಿರಲಿಲ್ಲ, ಕೋವಿಡ್‌ ದೃಢಪಟ್ಟಿತ್ತು. ಕಷಾಯ ಸೇವನೆ, ಯೋಗಾಭ್ಯಾಸ, ಪ್ರಾಣಾಯಾಮ, ಪ್ರತಿರೋಧಕ ಶಕ್ತಿ ವೃದ್ಧಿಯಿಂದ ಸಹಜವಾಗಿಯೇ ಗುಣವಾಯಿತು’ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

ತೋಟದ ಮನೆಯಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆದು ಕೋವಿಡ್‌ನಿಂದ ಗುಣಮುಖರಾಗಿರುವ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಒಂದೆರಡು ದಿನ ಉರಿ ಶೀತ ಇತ್ತು. ವೈದ್ಯ ವಿಕ್ರಂ ಸಲಹೆಯಂತೆ ಹಸುವಿನ ತುಪ್ಪ ಎರಡು ಹನಿ ಮೂಗಿಗೆ ಬಿಟ್ಟುಕೊಂಡಿದ್ದೆ. ಉರಿಶೀತ, ಮೂಗು ಕಟ್ಟುವುದು ಎರಡೂ ವಾಸಿಯಾದವು’ ಎಂದರು.

ADVERTISEMENT

‘ಬೆಳಿಗ್ಗೆ ಒಂದೊಂದು ಗಂಟೆ ನಡಿಗೆ ಮತ್ತು ಯೋಗಾಭ್ಯಾಸ, ಸಂಜೆ ಒಂದು ಗಂಟೆ ನಡಿಗೆ ಪಾಲಿಸಿದೆ. ಆಹಾರ ಮಾಮೂಲಿ; ಆದರೆ, ಸೇವನೆ ಪ್ರಮಾಣ ಕಡಿಮೆ ಮಾಡಿದ್ದೆ. ಕಾಳುಮೆಣಸಿನ ಸಾರು ಸೇವನೆ ಹೆಚ್ಚಿತ್ತು. ಕೋವಿಡ್‌ ಪಾಸಿಟಿವ್‌ ಬರುವ ಮುಂಚೆಯೇ ಪ್ರತಿರೋಧಕ ಶಕ್ತಿ ವೃದ್ಧಿಗೆ ಡಾ.ಗಿರಿಧರ ಕಜೆ ಅವರ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒಂದು ಹೊತ್ತಿಗೆ ಒಂದು ಮಾತ್ರೆ ಸೇವಿಸುತ್ತಿದ್ದೆ. ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಈ ಮಾತ್ರೆ ಖಂಡಿತ ಸಹಕಾರಿಯಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಅಮೃತ ಬಳ್ಳಿ, ನೆಲ ನೆಲ್ಲಿ ಕಷಾಯ ಸೇವಿಸಿದೆ. ಅರಿಶಿನ ಬೆರೆಸಿದ ಒಂದು ಲೋಟ ಹಾಲನ್ನು ರಾತ್ರಿ ಮಲುಗುವ ಮುನ್ನ ಕುಡಿಯುತ್ತಿದ್ದೆ’ ಎಂದು ತಾವು ಅನುಸರಿಸಿದ ವಿಧಾನ ಹಂಚಿಕೊಂಡರು.

‘ಊಟ, ಉಪಚಾರ ಆರೈಕೆ ಹೊಣೆ ನಿಭಾಯಿಸಿದ್ದು ಪತ್ನಿ ಪಲ್ಲವಿ. ಈ ಸಮಯದಲ್ಲಿ ಪುಸ್ತಕಗಳನ್ನು ಓದಿದೆ. ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದೆ. 12 ದಿನ ಆರಾಮಾಗಿಯೇ ಕಳೆದೆ. ಕೋವಿಡ್‌ ಬಗ್ಗೆ ಭೀತಿ ಬಿಡಿ, ಸೋಂಕಿತರನ್ನು ಪ್ರೀತಿಯಿಂದ ಆರೈಕೆ ಮಾಡಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.