ADVERTISEMENT

ಚಿಕ್ಕಮಗಳೂರು | ಸಂಪುಟ ದರ್ಜೆಗೆ ಹಣವಿದೆ; ಔಷಧಿಗೆ ಹಣವಿಲ್ಲ: ಸಿ.ಟಿ. ರವಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:40 IST
Last Updated 10 ಫೆಬ್ರುವರಿ 2026, 6:40 IST
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಿ.ಟಿ. ರವಿ ಅವರು ರೋಗಿಗಳಿಗೆ ಬರೆದುಕೊಟ್ಟಿದ್ದ ಔಷಧಿ ಚೀಟಿ ಪರಿಶೀಲಿಸಿದರು
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಿ.ಟಿ. ರವಿ ಅವರು ರೋಗಿಗಳಿಗೆ ಬರೆದುಕೊಟ್ಟಿದ್ದ ಔಷಧಿ ಚೀಟಿ ಪರಿಶೀಲಿಸಿದರು   

ಚಿಕ್ಕಮಗಳೂರು: ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ಸರ್ಕಾರದ ಬಳಿ ಹಣವಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ, ಮಾತ್ರೆ ಒದಗಿಸಲು ಹಣ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರ ದೂರಿನ ಮೇರೆಗೆ ನಗರದ ಅರಳುಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಹೊರ ರೋಗಿಗಳ ವಿಭಾಗ, ಡಯಾಲಿಸಿಸ್ ವಾರ್ಡ್‌ ಸೇರಿ ಹಲವು ವಾರ್ಡ್‌ಗಳಿಗೆ ಭೇಟಿ ನೀಡಿ  ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಚಿಕಿತ್ಸೆ ಹಾಗೂ ಊಟೋಪಚಾರದ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು. ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಕಳೆದ ವಾರ ಡಯಾಲಿಸಿಸ್ ಸೇವೆಯಲ್ಲಿ ಆಗಿದ್ದ ವ್ಯತ್ಯಯದ ಕುರಿತು ಅಧಿಕಾರಿಗಳಿಂದ ವಿವರಣೆ ಕೇಳಿದರು.

ADVERTISEMENT

ರೋಗಿಗಳನ್ನು ವಿಚಾರಿಸಿದ ವೇಳೆ ವೈದ್ಯರು ಬರೆದುಕೊಡುವ ಮಾತ್ರೆ ಮತ್ತು ಔಷಧಿಗಳು ಹೆಚ್ಚಿನದಾಗಿ ಆಸ್ಪತ್ರೆಯಲ್ಲಿ ದೊರಕುತ್ತಿಲ್ಲ. ಖಾಸಗಿ ಮೆಡಿಕಲ್‌ಗಳಿಂದ ದುಬಾರಿ ಹಣ ನೀಡಿ ತರಬೇಕಾಗಿದೆ ಎಂದು ರೋಗಿಗಳು ವಿವರಿಸಿದರು.

ಇದಕ್ಕೆ ಉತ್ತರಿಸಿದ ವೈದ್ಯರು ಕೆಲವೊಮ್ಮೆ ಔಷಗಳ ಪೂರೈಕೆಯಲ್ಲಿ ತಡವಾಗಿತ್ತಿದೆ. ಆ ಸಂದರ್ಭದಲ್ಲಿ ತುರ್ತು ಬೇಕಾದ ಔಷಗಳನ್ನು ಮಾತ್ರ ಖಾಸಗಿ ಮೆಡಿಕಲ್‌ಗಳಿಂದ ತರಲು ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿ.ಟಿ.ರವಿ, ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳು ಖಾಸಗಿಯಾಗಿ ಔಷಧ ತರುತ್ತಿರುವುದು ಗಂಭೀರ ವಿಚಾರ. ಆಸ್ಪತ್ರೆಗಳಿಗೆ ಔಷಧಗಳನ್ನು ಸರಬರಾಜು ಮಾಡಲಾಗದಷ್ಟು ಸರ್ಕಾರ ದಿವಾಳಿಯಾಗಿದೆಯಾ ಎಂದು ಪ್ರಶ್ನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಗಮ ಮಂಡಳಿಗಳಿಗೆ ಸಂಪುಟ ಸ್ಥಾನಮಾನ ನೀಡಿದೆ. ಒಂದೊದು ನಿಗಮದ ಅಧ್ಯಕ್ಷರಿಗೆ ₹6 ಲಕ್ಷದಿಂದ ₹10 ಲಕ್ಷದ ತನಕ ಹೊರೆ ಬಿದ್ದಿದೆ. ನಾಲ್ಕು ಜನರಿಗೆ ಸಂಪುಟ ದರ್ಜೆ ಸ್ಥಾನ ನೀಡಿ ಅವರನ್ನು ಮೆರೆಸುವುದು ಸರ್ಕಾರದ ಆದ್ಯತೆಯೋ ಅಥವಾ ಜನರ ಜೀವ ಉಳಿಸಿಕೊಳ್ಳಲು ಆದ್ಯತೆಯೋ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರ್ದೈವದ ಸಂಗತಿ ಎಂದರೆ ಡಯಾಲಿಸಿಸ್ ನಿರ್ವಹಣೆ ಮಾಡುವ ನೆಪ್ರೋಕೇರ್ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 10 ತಿಂಗಳಿಂದ ಸಂಬಳ ನೀಡಿಲ್ಲ. ಆಸ್ಪತ್ರೆಗಳಿಗೆ ಔಷಧಗಳನ್ನು ಸರಬರಾಜು ಮಾಡಲು ಕ್ರಮ ತಗೆದುಕೊಳ್ಳದ ಸರ್ಕಾರ ಇದ್ದರೇನು ಪ್ರಯೋಜನ ಎಂದು ಪ್ರಶ್ನಿಸಿದರು.

ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಚೀಟಿ ಬರೆದು ಖಾಸಗಿ ಮೆಡಿಕಲ್‌ಗಳಿಂದ ಔಷಧ ತರಿಸಿಕೊಂಡು ಚಿಕಿತ್ಸೆ ನೀಡುವುದು ನಿಯಮ ಬಾಹಿರ ಹಾಗೂ ಅಮಾನವೀಯ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಡ್ಯಾನ್ ಇದ್ದರು.

‘ಸಚಿವರ ಜತೆ ಚರ್ಚೆ’

ಜಿಲ್ಲಾ ಶಸ್ತ್ರಚಿಕಿತ್ಸಕರು ರಜೆಯಲ್ಲಿದ್ದಾರೆ. ಅವರೊಂದಿಗೂ ಮಾತನಾಡಿ ಸಮಸ್ಯೆ ಸರಿಪಡಿಸಲು ತಿಳಿಸುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿರುವ ಸಮಸ್ಯೆ ಬಗ್ಗೆ ಆರೋಗ್ಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಸಿ.ಟಿ.ರವಿ ತಿಳಿಸಿದರು.

 ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೂ ಅಧಿಕಾರಿಗಳು ತಂದಿಲ್ಲ. ತಂದಿದ್ದರೆ ಆರೋಗ್ಯ ಸಚಿವರು ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಜತೆಯಾದರೂ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಬಹುದಿತ್ತು. ರೋಗಿಗಳು ಮತ್ತು ಅವರ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬಂದ ಮೇಲೆ ಸಮಸ್ಯೆ ಅರ್ಥವಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.