
ಚಿಕ್ಕಮಗಳೂರು: ‘ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಜಾತಿ ದೌರ್ಜನ್ಯ ಪ್ರಕರಣ ನಿರ್ಲಕ್ಷಿಸುತ್ತಿರುವ ಪೊಲೀಸ್ ಅಧಿಕಾರಿಗಳ ಕ್ರಮವನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ. ಆರೋಪಿಗಳನ್ನು ಬಂಧಿಸದೆ ಇದ್ದರೆ ಎಸ್‌ಪಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಚಳವಳಿ ನಡೆಸುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಎಚ್ಚರಿಕೆ ನೀಡಿದರು.
‘ನಗರದ ಠಾಣಾ ವ್ಯಾಪ್ತಿಯಲ್ಲಿ ನ. 29ರಂದು ಪರಿಶಿಷ್ಟ ಜಾತಿಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆರೋಪಿಗಳನ್ನು ಬಂಧಿಸದೆ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದಮಳಲಿ ಗ್ರಾಮದ ಕಾಫಿತೋಟದ ಮಾಲಿಕರೊಬ್ಬರು ಡಿ. 8ರಂದು ದಲಿತ ಕಾರ್ಮಿಕೆ ಕೆಲಸಕ್ಕೆ ರಜೆ ಕೇಳಿದಾಗ ಕಾರ್ಮಿಕರಿಗೆ ಬೆತ್ತದಿಂದ ಥಳಿಸಿ, ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ’ ಎಂದರು.
‘ಈ ಎರಡೂ ಪ್ರಕರಣದ ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಲು ವಿಫಲರಾಗಿದ್ದು, ಪೊಲೀಸರು ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಕಂಡು ಬರುತ್ತಿದೆ. ಬಲವಾದ ಕಾಯ್ದೆಗಳಿದ್ದರೂ ಪೊಲೀಸರು ಕಾನೂನು ಪಾಲನೆ ಮಾಡುತ್ತಿಲ್ಲ. ಇಂಥ ಭ್ರಷ್ಟ ಅಧಿಕಾರಿಗಳ ಕರ್ತವ್ಯಲೋಪದಿಂದ ಪ್ರತಿದಿನ ದಲಿತ ಸಮುದಾಯದ ಮೇಲೆ, ಕಾರ್ಮಿಕರ ಮೇಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚು ನಡೆಯುತ್ತಿದೆ’ ಎಂದು ದೂರಿದರು.
‘ಲೈಂಗಿಕ ದೌರ್ಜನ್ಯದ ಆರೋಪಿಗಳು ಬಹಿರಂಗವಾಗಿ ಓಡಾಡುತ್ತಿದ್ದರೂ ಬಂಧಿಸದ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ತನಿಖೆಗೊಳಪಡಿಸಿ, ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸುತ್ತದೆ’ ಎಂದು ಅವರು ಹೇಳಿದರು.
ಸಂವಿಧಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ದಸಂಸ ಸಾಗರ ಬಣ ಜಿಲ್ಲಾ ಸಂಚಾಲಕ ಬಾಲಕೃಷ್ಣ, ಅಂಬೇಡ್ಕರ್ ವೈಚಾರಿಕ ವೇದಿಕೆ ಮಂಜುನಾಥ್, ನೊಂದವರಾದ ಲಕ್ಷ್ಮಿ, ಚಲುವ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.