ADVERTISEMENT

ಮೀಸಲು ಕ್ಷೇತ್ರದಲ್ಲೇ ಮೂಲ ಸೌಲಭ್ಯವಿಲ್ಲ: ದಸಂಸ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:33 IST
Last Updated 20 ಜುಲೈ 2025, 4:33 IST
ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಧರಣಿ ನಡೆಸಿ, ತಹಶೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಸಿದರು
ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಧರಣಿ ನಡೆಸಿ, ತಹಶೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಸಿದರು   

ಮೂಡಿಗೆರೆ: ‘ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜನಾಂಗದವರಿಗೇ ಮೂಲ ಸೌಲಭ್ಯಗಳು ಇಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ್ ಆರೋಪಿಸಿದರು.

ದಲಿತರ ಭೂಮಿ, ವಸತಿ ಸೇರಿದಂತೆ ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ತಾಲ್ಲೂಕು ಸಮಿತಿ ಮುಖಂಡರು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ, ತಹಶೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಮೀಸಲು ಕ್ಷೇತ್ರದಲ್ಲಿಯೇ ಸ್ಮಶಾನ, ನಿವೇಶನ, ಮನೆ, ಜಮೀನಿಗಾಗಿ ದಲಿತರು ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ ರಾಜ್ಯ ಸರ್ಕಾರವು ಭೂಮಾಲೀಕರಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ನೀಡಲು ಮುಂದಾಗಿದೆ. ಸರ್ಕಾರಕ್ಕೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಸಮಾಜದ ದಮನಿತ ವರ್ಗಗಳ ಏಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ತಾಲ್ಲೂಕು ಒಳಗೊಂಡಂತೆ ರಾಜ್ಯದಲ್ಲಿ ದಲಿತ ವರ್ಗಕ್ಕೆ ಸೂಕ್ತ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ತಾಲ್ಲೂಕು ಸಂಚಾಲಕ ಸಂತೋಷ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಎಲ್ಲ ಬೇಡಿಕೆಗಳನ್ನೂ ಈಡೇರಿಸುತ್ತಿತ್ತು. ಸರ್ಕಾರವನ್ನು ಎಚ್ಚರಿಸಲು ರಾಜ್ಯದ ಎಲ್ಲ ತಾಲ್ಲೂಕಿನಲ್ಲಿ ದಲಿತರ ಹಕ್ಕೊತ್ತಾಯಕ್ಕಾಗಿ ಧರಣಿ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಹೇಳಿದರು.

ನಾಗೇಶ್ ಮೇರಿ, ಪ್ರಮಿಳಾ, ಕಾವ್ಯ, ಸುಮಿತ್ರಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.