ಕಳಸ: ಸತತ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕೊಳೆ ರೋಗ ಬಾಧಿಸಿ ಕಾಫಿ ಮಿಡಿಗಳು ಕೊಳೆಯುತ್ತಿವೆ, ಗಿಡಗಳ ಬುಡದಲ್ಲಿ ನೀರು ನಿಂತು, ತೇವಾಂಶ ಹೆಚ್ಚಾಗಿ, ಹಸಿರುಕಾಯಿ ಉದುರುತ್ತಿದೆ. ತಾಲ್ಲೂಕಿನ ಬಹುತೇಕ ರೊಬಸ್ಟಾ ಕಾಫಿ ತೋಟಗಲ್ಲಿ ಈ ದೃಶ್ಯ ಸಾಮಾನ್ಯವಾಗಿದ್ದು, ಒಂದೆಡೆ ಫಸಲು ನೆಲಸಮ ಆಗುತ್ತಿದ್ದರೆ, ಇನ್ನೊಂದೆ ಕಾಫಿಗೆ ಬೆಲೆ ಏರುತ್ತಿದೆ. ಆದರೆ, ಬೆಲೆ ಏರಿಕೆ ಲಾಭ ಪಡೆಯಲು ಆಗದೆ ಬೆಳೆಗಾರ ಕೈಕೈ ಹೊಸುಕಿಕೊಳ್ಳುವಂತ ಪರಿಸ್ಥಿತಿ ಇದೆ.
ಪ್ರತಿ ಮೂಟೆ ರೊಬಸ್ಟಾ ಚೆರ್ರಿ ಕಾಫಿ ಬೆಲೆ ₹10 ಸಾವಿರ ದಾಟಿದೆ. ಈ ಬಾರಿಯೂ ಹೆಚ್ಚಿನ ಇಳುವರಿ ಮತ್ತು ಬಂಪರ್ ಬೆಲೆ ಪಡೆಯಬೇಕು ಎಂಬ ಛಲದಿಂದ ಬೆಳೆಗಾರರು ಮುತುವರ್ಜಿಯಿಂದ ಕಾಫಿ ಕೃಷಿ ಮಾಡಿದ್ದರು. ಆದರೆ, ಸತತ ಮಳೆಯಿಂದ ಕಾಫಿ ಗಿಡದಲ್ಲಿ ಫಸಲು ನೆಲಕ್ಕೆ ಉದುರುತ್ತಿದೆ. ಹೆಚ್ಚಿನ ತೇವಾಂಶವು ಕಾಫಿ ತೋಟದಲ್ಲಿ ಕಾಯಿಕೊಳೆ ರೋಗವನ್ನು ಹರಡುತ್ತಿದೆ. ಹಿಂದಿನ ವರ್ಷಗಳಲ್ಲಿ, ನಮ್ಮ ತೋಟದಲ್ಲಿ ಕೊಳೆ ರೋಗವೇ ಇರಲಿಲ್ಲ ಎನ್ನುತ್ತಿದ್ದ ಬೆಳೆಗಾರರು ಕೂಡ ಈ ವರ್ಷ ಕೊಳೆ ರೋಗದಿಂದ ಚಿಂತಾಕ್ರಾಂತರಾಗಿದ್ದಾರೆ.
‘ಕಾಫಿ ಬೆಲೆ ಹೆಚ್ಚಾಗಿರುವುದರಿಂದ ಈ ಬಾರಿ ಬಹಳ ಕ್ರಮಬದ್ಧವಾಗಿ ಕಾಫಿ ಕೃಷಿ ಮಾಡಿದ್ದೆವು. ಆದರೆ ಒಂದು ವಾರದಲ್ಲಿ 33 ಇಂಚು ಮಳೆ ಆಗಿದೆ. ಈಗಾಗಲೇ ಕೆಲವು ಗಿಡಗಳಲ್ಲಿ ಶೇ.50ರಷ್ಟು ಕಾಫಿ ಉದುರಿದೆ. ಇದರಿಂದ ಬಹಳ ನಿರಾಸೆ ಆಗಿದೆ’ ಎಂದು ಲಿಂಬೆಕೊಂಡದ ಕಾಫಿ ಬೆಳೆಗಾರ ಚಂದ್ರಶೇಖರ್ ಬೇಸರದಿಂದ ಹೇಳಿದರು.
‘ಕಾಫಿ ತೋಟದಲ್ಲಿ ನೀರು ಬಸಿದು ಹೋಗಲು ಚರಂಡಿ ನಿರ್ಮಿಸಿದರೆ ಕಾಯಿ ಉದುರುವುದು ನಿಲ್ಲುತ್ತದೆ ಎಂಬ ಸಲಹೆ ವಿಜ್ಞಾನಿಗಳದ್ದು. ಮಳೆಯಿಂದಾಗಿ ತೋಟದಲ್ಲಿ ಸಾರಜನಕ ಬಸಿದು ಹೋಗುವುದರಿಂದ ಎಕರೆಗೆ 1 ಚೀಲ ಯೂರಿಯಾ ಅಥವಾ 2 ಚೀಲ ಕ್ಯಾಲ್ಸಿಯಂ ನೈಟ್ರೇಟ್ ಬಳಸಲು ಶಿಫಾರಸು ಮಾಡಲಾಗಿದೆ.
‘ನೋಕ್ಷಿಯಾ ಎಂಬ ಶಿಲೀಂಧ್ರದಿಂದ ಕಾಯಿಕೊಳೆ ರೋಗ ಹರಡುತ್ತದೆ. ಈ ರೋಗದ ನಿಯಂತ್ರಣಕ್ಕೆ ಕೊಳೆರೋಗ ಬಾಧಿತ ಕಾಯಿ ಮತ್ತು ಎಲೆಗಳನ್ನು ತೋಟದಿಂದ ತೆಗೆದು ನಾಶಪಡಿಸಬೇಕು’ ಎಂದು ಕಾಫಿ ಮಂಡಳಿಯ ರೋಗ ಶಾಸ್ತ್ರಜ್ಷೆ ಸುಧಾ ಹೇಳಿದರು.
ರೋಗ ತೀವ್ರವಾಗಿರುವ ಗಿಡಗಳ ಪಟ್ಟೆಯಲ್ಲಿ ಪ್ರತಿ ಬ್ಯಾರೆಲ್‍ಗೆ 200 ಮಿ.ಲೀ. ಬೂನಾಸ್ ಔಷಧಿ ಮತ್ತು 50 ಮಿ.ಲೀ. ಪ್ಲಾನೋಫಿಕ್ಸ್ ಬೆರೆಸಿ ಸಿಂಪಡಣೆ ಮಾಡಬಹುದು. ಗಿಡದ ನೆತ್ತಿ ಬಿಡಿಸಿ ಅನುಪಯುಕ್ತ ಚಿಗುರುಗಳನ್ನು ತೆಗೆಯಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಮಳೆ ಮುಂದುವರಿದಿದ್ದು, ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಬೆಳೆ ರಕ್ಷಿಸಿಕೊಳ್ಳಲು ಈ ಕ್ರಮಗಳನ್ನು ಸಕಾಲಕ್ಕೆ ಕೈಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಬೆಳೆಗಾರರು.
‘ತೋಟದಲ್ಲಿ ಹಸಿರುಕಾಯಿ ಉದುರುತ್ತಿದ್ದು ಬೆಳೆಗಾರರ ಚಿಂತೆ ಹೆಚ್ಚಿದೆ. ಕಾಫಿ ಗಿಡಗಳ ಬುಡದಲ್ಲಿ ನೀರು ನಿಲ್ಲುವುದರಿಂದ ತೇವಾಂಶ ಹೆಚ್ಚಿ ವೆಟ್ ಫೂಟ್ ರೋಗ ಕಾರಣದಿಂದ ಹಸಿರು ಕಾಯಿ ಉದುರುತ್ತದೆಶಿವಪ್ರಸಾದ್ ಕಾಫಿ ಮಂಡಳಿ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.