ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಆರಂಭದ ದಿನವಾದ ಗುರುವಾರ ಅನಸೂಯಾ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು.
ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಕಾಲ್ನಡಿಗೆ ಮೂಲಕ ಹೊರಟ ಸಂಕೀರ್ತನಾ ಯಾತ್ರೆ, ಐ.ಜಿ. ರಸ್ತೆ, ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನ ಹಾದು ಕಾಮಧೇನು ಗಣಪತಿ ದೇವಾಲಯ ತಲುಪಿತು.
ಸಾವಿರಕ್ಕೂ ಹೆಚ್ಚು ಮಹಿಳೆಯರು ಕೊರಳಿಗೆ ಕೇಸರಿ ಶಾಲು ಧರಿಸಿ, ಅನಸೂಯಾ ದೇವಿಯ ಚಿತ್ರಪಟ ಹಿಡಿದು ಸಾಗಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಭಾಗವಹಿಸಿದ್ದರು. ಬಳಿಕ ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದರು. ಅಲ್ಲಿ ಅನಸೂಯಾ ದೇವಿ ಪೂಜೆ, ಗಣಪತಿ ಪೂಜೆ, ದುರ್ಗಾಹೋಮ, ಕಲಾಶಾಭಿಷೇಕ ಮಾಡಿದರು. ಸಣ್ಣದಾಗಿ ಬರುತ್ತಿದ್ದ ಮಳೆ ಮತ್ತು ಕೊರೆಯ ಚಳಿಯ ನಡುವೆ ಸರತಿಯಲ್ಲಿ ಸಾಗಿ ದತ್ತ ಪಾದುಕೆ ದರ್ಶನ ಪಡೆದರು.
ಸಂಕೀರ್ತನಾ ಯಾತ್ರೆ ಉದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಶುಕ್ರವಾರ ಶೋಭಾಯಾತ್ರೆ ನಡೆಯಲಿದ್ದು, ಶನಿವಾರ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ದತ್ತ ಪಾದುಕೆ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.