ADVERTISEMENT

ಚಿಕ್ಕಮಗಳೂರು: ದತ್ತ ಜಯಂತಿ ಇಂದಿನಿಂದ

ರಾರಾಜಿಸುತ್ತಿರುವ ಕೇಸರಿ ಬಂಟಿಂಗ್: ಎಲ್ಲೆಡೆ ಖಾಕಿಮಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:45 IST
Last Updated 2 ಡಿಸೆಂಬರ್ 2025, 5:45 IST
ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಕೇಸರಿ ಬಂಟಿಂಗ್ ರಾರಾಜಿಸುತ್ತಿರುವುದು
ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಕೇಸರಿ ಬಂಟಿಂಗ್ ರಾರಾಜಿಸುತ್ತಿರುವುದು   

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆ ವತಿಯಿಂದ ಮೂರು ದಿನ ನಡೆಯಲಿರುವ ದತ್ತ ಜಯಂತಿಯಲ್ಲಿ ಶಾಂತಿ–ಸೌಹಾರ್ದ ಕಾಪಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಡಿ.2ರಂದು ಅನುಸೂಯ ಜಯಂತಿ, 3ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, 4ರಂದು ಶ್ರೀಗುರು ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ.

ನಗರದಲ್ಲಿ ಎಲ್ಲೆಡೆ ಕೇಸರಿ ಬಂಟಿಂಗ್ಸ್‌ಗಳು ಹಾರಾಡುತ್ತಿವೆ. ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಎಲ್ಲೆಡೆ ಪೊಲೀಸರನ್ನೂ ನಿಯೋಜಿಸಲಾಗಿದ್ದು, ಇಡೀ ನಗರದಲ್ಲಿ ಸೋಮವಾರ ಎಲ್ಲೆಲ್ಲೂ ಪೊಲೀಸರೇ ಕಂಡು ಬಂದರು. ಎಲ್ಲೆಡೆ ಬ್ಯಾರಿಕೇಡ್‌ಗಳನ್ನೂ ಅಳವಡಿಸಲಾಗಿದೆ.

ADVERTISEMENT

ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಬೇರೆ ಪ್ರವಾಸಿಗರು ದಿನಾಂಕ ಮುಂದೂಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಡಿ.5ರ ಬೆಳಿಗ್ಗೆ 10 ಗಂಟೆ ತನಕ ಪ್ರವಾಸಿಗರಿಗೆ ನಿಷೇಧವಿದೆ. ಸ್ಥಳೀಯರು ಮತ್ತು ಹೋಮ್‌ಸ್ಟೇಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ.

ಶೋಭಾಯಾತ್ರೆ, ಪಾದುಕೆ ದರ್ಶನದ ದಿನ ಹಲವು ರಸ್ತೆಗಳಲ್ಲಿ ಸಂಚಾರ ಬಂದ್ ಆಗಲಿದ್ದು, ಪ್ರವಾಸಿಗರು ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಸಿದ್ಧತೆ ಪರಿಶೀಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಮತ್ತು ಉಪವಿಭಾಗಾಧಿಕಾರಿ ಸುದರ್ಶನ್
ಪೊಲೀಸರು ನಗರದಲ್ಲಿ ಸೋಮವಾರ ಪಥ ಸಂಚಲನ ನಡೆಸಿದರು

ಭದ್ರತೆಗೆ ಬಂದಿಳಿದ 5 ಸಾವಿರ ಪೊಲೀಸರು ದತ್ತ ಜಯಂತಿ ಸಂದರ್ಭದಲ್ಲಿ ಶಾಂತಿ–ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು 5 ಸಾವಿರ ಪೊಲೀಸರುನ್ನು ನಿಯೋಜನೆ ಮಾಡಲಾಗಿದೆ.  ರಾಮನಹಳ್ಳಿಯ ಡಿಎಆರ್ ಆಟದ ಮೈದಾನದಲ್ಲಿ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಲಾಯಿತು. ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿಕ್ರಮ ಅಮಟೆ ನೇತೃತ್ವದಲ್ಲಿ ಸಿಬ್ಬಂದಿ ನಗರದಲ್ಲಿ ಕವಾಯತು ನಡೆಸಿದರು.  ಕ್ವಿಕ್ ಆಕ್ಷನ್ ಪೋರ್ಸ್ ಸ್ಪೆಷಲ್ ಆಕ್ಷನ್ ಪೋರ್ಸ್ ರ‍್ಯಾಪಿಡ್ ಆಕ್ಷನ್ ಪೋರ್ಸ್ ತಂಡಗಳು ಕಾರ್ಯನಿರ್ವಹಿಸಲಿವೆ. ನಗರ ಸೇರಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಸಾಗುವ ಮಾರ್ಗ ಮತ್ತು ಗಿರಿಯಲ್ಲಿ ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ವಿಕ್ರಮ ಅಮಟೆ ತಿಳಿಸಿದರು. ಶೋಭಾಯಾತ್ರೆ ಸಾಗುವ ಮಾರ್ಗದದಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 15 ಡ್ರೋನ್‌ ಬಳಕೆ ಮಾಡಲಾಗುತ್ತಿದೆ. ಗಡಿಗಳಲ್ಲಿ  28 ಚೆಕ್‌ಪೋಸ್ಟ್‌ ತೆರೆಯಲಾಗಿದೆ ಎಂದು ವಿವರಿಸಿದರು. ಗಿರಿಭಾಗದಲ್ಲಿ ಚಳಿ ವಾತಾವರಣ ಇರುವುದರಿಂದ 45 ವರ್ಷದೊಳಗಿನ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.  

ಸಿದ್ಧತೆ ಪರಿಶೀಲನೆ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆದಿರುವ ತಯಾರಿ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಉಪವಿಭಾಗಾಧಿಕಾರಿ ಸುದರ್ಶನ್ ಪರಿಶೀಲನೆ ನಡೆಸಿದರು. ಭಕ್ತರು ಸರಾಗವಾಗಿ ಪಾದುಕೆ ದರ್ಶನ ಮಾಡಲು ಎಲ್ಲಾ ರೀತಿಯ ತಯಾರಿನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಬ್ಯಾರಿಕೇಡ್‌ಗಳುನ್ನು ಅಳವಡಿಸಲಾಗಿದೆ ಹೋಮ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ. ಮಳೆ ಬಂದರೆ ಪೊಲೀಸರು ರಕ್ಷಣೆ ಪಡೆಯಲು ಅವರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿ ಹಲವೆಡೆ ಕುಸಿತ ಉಂಟಾಗಿರುವುದರಿಂದ ಲಾಂಗ್‌ ಚಾರ್ಸಿ ಬಸ್‌ಗಳ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಗುಹೆಯೊಳಗೆ ಪೊಟೊ ತೆಗೆಯಲು ಚಿತ್ರೀಕರಣ ಮಾಡಲು ಅವಕಾಶವಿಲ್ಲ. ಪ್ಲಾಸ್ಟಿಕ್‌ ಬಳಕೆ ನಿಷೇಸಲಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.