ಅಜ್ಜಂಪುರ: ಅತ್ತೆಗೆ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದ ಆರೋಪಿ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಅಜ್ಜಂಪುರ ಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿದ್ದು, ಆರೋಪಿಗಳಿಂದ ₹36 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಟೆಂಪೊ ಟ್ರಾವಲರ್, ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ತಡಗ ಗ್ರಾಮದ ದೇವಿರಮ್ಮ ಕೊಲೆಯಾದವರು. ಅವರ ಸೊಸೆ ಅಶ್ವಿನಿ (34), ಆಕೆಯ ಪ್ರಿಯಕರ ಶಿವನಿ ಗ್ರಾಮದ ಆಂಜನೇಯ ಎಸ್.ಎಸ್.(30) ಕೊಲೆ ಆರೋಪಿಗಳು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೊಸೆ ಅಶ್ವಿನಿ ಮತ್ತು ಆಂಜನೇಯ ನಡುವೆ ಅಕ್ರಮ ಸಂಬಂಧವಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಆಂಜನೇಯ, ಅಶ್ವಿನಿಯಿಂದ ದೇವಿರಮ್ಮ ಅವರಿಗೆ ಸೇರಿದ್ದ ಚಿನ್ನಾಭರಣವನ್ನು ಪಡೆದುಕೊಂಡಿದ್ದ. ಅಶ್ವಿನಿ, ನಕಲಿ ಕೀ ಬಳಸಿ, ಚಿನ್ನಾಭರಣ ತೆಗೆದುಕೊಂಡಿದ್ದರು. ಇದು ಅತ್ತೆ ದೇವಿರಮ್ಮಗೆ ಗೊತ್ತಾಗುತ್ತದೆ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿ ಆಗಸ್ಟ್ 10ರಂದು ದೇವಿರಮ್ಮ ಅವರಿಗೆ ಊಟದಲ್ಲಿ 20 ನಿದ್ರೆ ಮಾತ್ರೆ ಹಾಕಿದ್ದರು. ಊಟದ ಬಳಿಕ ದೇವಿರಮ್ಮ ಅವರು ಸುಸ್ತಾದರೂ ಆಸ್ಪತ್ರೆಗೆ ದಾಖಲಿಸಲು ತಡ ಮಾಡಿದ್ದರಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ದೇವಿರಮ್ಮ ಮೃತಪಟ್ಟಿದ್ದರು. ವಿಷಯ ಮರೆಮಾಚಿ ಆ.11ರಂದು ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವನ್ನೂ ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡ ಮೃತರ ಪುತ್ರಿ ವೀಣಾ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಭೇದಿಸಿದ ಪಟ್ಟಣ ಪೊಲೀಸರು, ಆರೋಪಿಗಳನ್ನು ಬಂಧಿಸಿ, ₹ 20.34 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಚಿನ್ನಾಭರಣ ಅಡವಿಟ್ಟು ಖರೀದಿಸಿದ ₹16 ಲಕ್ಷ ಮೌಲ್ಯದ ಟೆಂಪೊ ಟ್ರಾವೆಲರ್ ಮತ್ತು ಬಜಾಜ್ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ವೀರೇಂದ್ರ, ಪಿಎಸ್ಐ ಗಜೇಂದ್ರ, ಚಂದ್ರಮ್ಮ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.