ADVERTISEMENT

ಡಿಸಿಸಿ ಬ್ಯಾಂಕ್: ಹಾಲಿ, ಮಾಜಿ ಶಾಸಕರು ಸ್ಪರ್ಧೆ

ಒಟ್ಟು 27 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:10 IST
Last Updated 10 ಜನವರಿ 2026, 7:10 IST
ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರ ಬಂದ ಬಿಜೆಪಿ ಮುಖಂಡರು, ಕಾರ್ಯಕರ್ತರತ್ತ ವಿಜಯದ ಸಂಕೇತ ತೋರಿಸಿದರು
ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರ ಬಂದ ಬಿಜೆಪಿ ಮುಖಂಡರು, ಕಾರ್ಯಕರ್ತರತ್ತ ವಿಜಯದ ಸಂಕೇತ ತೋರಿಸಿದರು   

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ನಿರ್ದೇಶಕ ಸ್ಥಾನಕ್ಕೆ ಮಾಜಿ ಮತ್ತು ಹಾಲಿ ಶಾಸಕರುಗಳು ಧುಮುಕಿದ್ದು, ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಮತ್ತೊಂದೆಡೆ ಕಡೂರು ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ತರೀಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್ ನಾಮಪತ್ರ ಸಲ್ಲಿಸಿದರು.

ಕಡೂರು, ತರೀಕೆರೆಯಿಂದ ನೂರಾರು ಜನ ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ಎದುರು ಜಮಾಯಿಸಿ ತಮ್ಮ ನಾಯಕರ ಪರ ಜಯಘೋಷ ಮೊಳಗಿಸಿದರು.

ADVERTISEMENT

ಚಿಕ್ಕಮಗಳೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 2 ಸ್ಥಾನಗಳಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಎಸ್.ಎಲ್.ಭೋಜೇಗೌಡ, ಬಿಜೆಪಿ ಮುಖಂಡ ಎಂ.ಎಸ್. ನಿರಂಜನ್, ಟಿ.ಇ. ಮಂಜುನಾಥ್, ಎಚ್.ಬಿ. ಸತೀಶ್ ಸೇರಿ 5 ಜನ ನಾಮಪತ್ರ ಸಲ್ಲಿಸಿದ್ದಾರೆ.

ಕಡೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 2 ಸ್ಥಾನಗಳಿಗೆ ಬೆಳ್ಳಿ ಪ್ರಕಾಶ್, ಎಸ್.ವಿ. ಬಸವರಾಜಪ್ಪ ಹಾಗೂ ಎಚ್.ಕೆ. ದರ್ಶನ್ ಸೇರಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ತರೀಕೆರೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 2 ಸ್ಥಾನಗಳಿಗೆ ಮಾಜಿ ಶಾಸಕ ಡಿ.ಎಸ್. ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್. ಆನಂದಪ್ಪ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಮೂಡಿಗೆರೆ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಕಾಫಿ ಬೆಳೆಗಾರರ ಒಕ್ಕೂಟದ(ಕೆಜಿಎಫ್) ಅಧ್ಯಕ್ಷ ಎಚ್.ಬಿ. ಶಿವಣ್ಣ ನಾಮಪತ್ರ ಸಲ್ಲಿಸಿದ್ದಾರೆ.

ಕೊಪ್ಪ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಯು.ಎಸ್. ಪ್ರಜ್ವಲ್, ಕೆ.ಎಸ್. ರವೀಂದ್ರ, ಬಿ.ಎಸ್. ಸತೀಶ್ ಸೇರಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಶೃಂಗೇರಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಎಚ್.ಕೆ. ದಿನೇಶ್ ಹೆಗ್ಡೆ, ಬಿ.ಜಿ. ಪ್ರಸನ್ನ ನಾಮಪತ್ರ ಸಲ್ಲಿಸಿದ್ದಾರೆ. ನರಸಿಂಹರಾಜಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 1 ಸ್ಥಾನಕ್ಕೆ ಕೆ.ಸಿ. ಜಯಪಾಲ್ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಟಿ.ಕೆ. ಜಗದೀಶ್, ಎಸ್.ಡಿ. ಸೋನಾಲ್ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯ ಎಲ್ಲಾ ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಎಚ್.ಕೆ. ದಿನೇಶ್ ಹೊಸೂರು, ಕಡೂರು ಶಾಸಕ ಕೆ.ಎಸ್. ಆನಂದ್ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಉಳಿದ ಎಲ್ಲಾ ಸಹಕಾರ ಸಂಘಗಳ ಒಂದು ಸ್ಥಾನಕ್ಕೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಟಿ.ಎಲ್. ರಮೇಶ್, ಪಿ. ಮಂಜುನಾಥ್ ಜೋಶಿ, ಈ.ಆರ್. ಮಹೇಶ್, ಎಸ್.ಬಿ. ಆನಂದಪ್ಪ, ಎಂ. ಮಹೇಶ್ ಸೇರಿ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ ಇಂದು

ಜ. 10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಯಾರ ನಾಮಪತ್ರಗಳು ಸಿಂಧುವಾಗಿವೆ ಎಂಬುದು ಖಚಿತವಾಗಲಿದೆ. ಕೆಲ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಪುರಸ್ಕೃತವಾದರೆ ಅವರ ಆಯ್ಕೆ ಅವಿರೋಧವಾಗಲಿದೆ. ಜ. 11ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜ. 17ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಬಳಿಕ ಅದೇ ದಿನ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.