ADVERTISEMENT

ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹50 ಲಕ್ಷ: ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 6:20 IST
Last Updated 28 ಫೆಬ್ರುವರಿ 2026, 6:20 IST
ಸುಧಾಕರ ಎಸ್.ಶೆಟ್ಟಿ
ಸುಧಾಕರ ಎಸ್.ಶೆಟ್ಟಿ   

ಕೊಪ್ಪ: ‘ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಆನೆ ತುಳಿತದಿಂದ ಮೃತಪಟ್ಟ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಣೆ ಮಾಡಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ವಪಕ್ಷದ ಸಭೆ ಕರೆದು ಚರ್ಚಿಸಬೇಕು. ವಿರೋಧ ಪಕ್ಷವನ್ನು ಕಡೆಗಣಿಸಬಾರದು. ಕಾಂಗ್ರೆಸ್‌ಗೆ ಮಾತ್ರ ಸಚಿವರು ಎಂಬಂತೆ ಆಗಬಾರದು' ಎಂದರು.

‘ಭಾನುವಾರ ಆನೆ ತುಳಿತದಿಂದ ಮೃತಪಟ್ಟ ಕಾರ್ಮಿಕ ಮಹಿಳೆ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಟಿ ಪ್ರಹಾರ ಮಾಡಲಾಗಿದೆ. ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಬಿಜೆಪಿ, ಜೆಡಿಎಸ್ ರಾಜಕರಣಗೊಳಿಸಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ’ ಎಂದು ದೂರಿದರು.

ADVERTISEMENT

‘ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೃತ ಮಹಿಳೆಯ ಮಗ, ಪತಿ ನಮ್ಮ ಜೊತೆ ಹೋರಾಟದಲ್ಲಿ ಭಾಗವಹಿಸಿದ್ದರು. ಆದರೆ, ಅದೇ ಸಂದರ್ಭದಲ್ಲಿ ಮೃತ ಮಹಿಳೆ ಕುಟುಂಬದವರು ಎಂದು ಹೇಳಿಕೊಂಡು ಕೆಲವರು ಮೃತದೇಹ ಕೊಂಡೊಯ್ಯುವುದಾಗಿ ಹೇಳಿದ್ದರು. ಆಗ ನಾನು ಪ್ರಶ್ನಿಸಿದ್ದೆ. ಅಂದು ಅಧಿಕಾರಿಗಳು, ಶಾಸಕರು ಸಮಯಕ್ಕೆ ಸರಿಯಾಗಿ ಬಂದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಿಗ್ಗಾ ರಾಮಸ್ವಾಮಿ, ಮುಖಂಡರಾದ ಕುಂಚೂರು ವಾಸಪ್ಪ, ಪೂರ್ಣೇಶ್, ಎನ್.ಆರ್.ಪುರದ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.