ADVERTISEMENT

ಧರ್ಮಸ್ಥಳಕ್ಕೆ ಪಾದಯಾತ್ರೆ: ಚಾರ್ಮಾಡಿ ಕಣಿವೆಯಲ್ಲಿ ಭಕ್ತರ ಸಾಲು

ವಿಜಯಕುಮಾರ್ ಎಸ್.ಕೆ.
Published 6 ಮಾರ್ಚ್ 2024, 5:45 IST
Last Updated 6 ಮಾರ್ಚ್ 2024, 5:45 IST
<div class="paragraphs"><p>ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.</p></div>

ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.

   

ಚಿಕ್ಕಮಗಳೂರು: ನೆತ್ತಿಯ ಮೇಲೆ ಉರಿ ಬಿಸಿಲು, ತಲೆಯ ಮೇಲೆ ಕೇಸರಿ ಶಾಲು, ಕೈಯಲ್ಲೊಂದು ಊರುಗೋಲು, ವಾರಗಟ್ಟಲೆ ನಡೆದರೂ ಬತ್ತದ ಉತ್ಸಾಹ, ಧರ್ಮಸ್ಥಳ ಸೇರುವುದೊಂದೇ ಗುರಿ...

ಶಿವರಾತ್ರಿಯಂದು ಮಂಜುನಾಥಸ್ವಾಮಿಯ ದರ್ಶನ ಪಡೆಯಲು ಧರ್ಮಸ್ಥಳದತ್ತ ಭಕ್ತರ ದಂಡು ಹೊರಟಿದೆ. ಚಾರ್ಮಾಡಿ ಕಣಿವೆಯಲ್ಲಿ ಭಕ್ತರು ಸಾಲುಗಟ್ಟಿದ್ದಾರೆ. ಬಳ್ಳಾರಿ, ಬೆಂಗಳೂರು, ಹೊಸಕೋಟೆ, ಗಂಗಾವತಿ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆಯಿಂದ ಭಕ್ತರು ಬಂದಿದ್ದು, ಧರ್ಮಸ್ಥಳದತ್ತ ಮುಖ ಮಾಡಿದ್ದಾರೆ.

ADVERTISEMENT

ಯುವಕರು, ವೃದ್ಧರು, ಅಂಗವಿಕಲರೂ ಧರ್ಮಸ್ಥಳದತ್ತ ಹೊರಟಿದ್ದಾರೆ. ಕೆಲವರು ಮಕ್ಕಳನ್ನು ಹೊತ್ತು ಸಾಗುತ್ತಿದ್ದರೆ, ಬಹುತೇಕರು ತಮ್ಮ ಬಟ್ಟೆಯ ಬ್ಯಾಗ್‌ಗಳನ್ನು ತಲೆಯ ಮೇಲೆ ಹೊತ್ತು ತೆರಳುತ್ತಿದ್ದಾರೆ.

ಯಾವುದೇ ರಸ್ತೆಯಲ್ಲಿ ಬಂದರೂ ಅಂತಿಮವಾಗಿ ಮೂಡಿಗೆರೆ ಬಳಿ ಎಲ್ಲಾ ರಸ್ತೆಗಳು ಕೂಡುತ್ತವೆ. ಅಲ್ಲಿಂದ ಚಾರ್ಮಾಡಿ ಘಾಟಿಯಲ್ಲಿ ಎಲ್ಲರೂ ಒಟ್ಟಾಗಿ ಸಾಗುತ್ತಿದ್ದಾರೆ. ಭಕ್ತರಿಗೆ ಅಲ್ಲಲ್ಲಿ ಊಟ, ಉಪಾಹಾರ, ನೀರು, ತಿನಿಸು, ಎಳನೀರನ್ನು ಸ್ಥಳೀಯರು ನೀಡುತ್ತಿದ್ಧಾರೆ. ಸ್ಥಳೀಯರ ಜತೆಗೆ ಬೆಂಗಳೂರು, ಬಳ್ಳಾರಿಯಿಂದಲೂ ಬಂದಿರುವ ಭಕ್ತರ ತಂಡ, ಪಾದಯಾತ್ರಿಗಳಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದೆ.

ಬಳ್ಳಾರಿಯ ನಾರಾಯಣಸ್ವಾಮಿ ಎಂಬುವರು ಐದು ಸಾವಿರಕ್ಕೂ ಹೆಚ್ಚು ಜೋಳದ ಖಡಕ್‌ ರೊಟ್ಟಿಗಳನ್ನೂ ತಂದು ಸ್ಥಳದಲ್ಲೇ ಪಲ್ಯ ತಯಾರಿಸಿ ಭಕ್ತರಿಗೆ ವಿತರಿಸುತ್ತಿದ್ದಾರೆ. ಚಾರ್ಮಾಡಿ ಘಾಟಿಯ ಸೇತುವೆಯೊಂದರ ಬಳಿ ಟೆಂಟ್ ನಿರ್ಮಿಸಿಕೊಂಡು ಮೂರು ದಿನಗಳಿಂದ ಅಲ್ಲೇ ಊಟ–ಉಪಾಹಾರ ತಯಾರಿಸಿ ಭಕ್ತರಿಗೆ ಉಣಬಡಿಸುತ್ತಿದ್ದಾರೆ. ‘ಐದು ವರ್ಷಗಳಿಂದ ಇದೇ ಸ್ಥಳದಲ್ಲಿ ಭಕ್ತರಿಗೆ ಊಟ–ಉಪಾಹಾರ ನೀಡುತ್ತಿದ್ದೇವೆ’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ಯುವಕರ ತಂಡವೊಂದು ಐದು ಸಾವಿರ ಎಳನೀರುಗಳನ್ನು ತಂದು ಭಕ್ತರಿಗೆ ದಾರಿಯಲ್ಲಿ ವಿತರಣೆ ಮಾಡಿತು. ಗಂಗಾವತಿಯಿಂದ ಹೊರಟಿರುವ ಯುವಕರ ತಂಡವೊಂದು ನಡೆದು ಸಾಗುತ್ತಿದೆ. ಅವರು ಲಾರಿಯ ತುಂಬ ಆಹಾರ ಸಾಮಗ್ರಿ ತಂದಿದ್ದಾರೆ. ಅಲ್ಲಲ್ಲಿ ನಿಲ್ಲಿಸಿಕೊಂಡು ಅಡುಗೆ ತಯಾರಿಸಿ ತಾವು ಊಟ ಮಾಡುವ ಜತೆಗೆ ನೂರಾರು ಭಕ್ತರಿಗೆ ವಿತರಿಸುತ್ತಿದ್ದಾರೆ.

ಊಟ- ಚಿಕಿತ್ಸೆ- ಮಸಾಜ್

ಮೂಡಿಗೆರೆ ಬಳಿಯ ಕಾಫಿ ಕ್ಯೂರಿಂಗ್ ಆವರಣದಲ್ಲಿ ಭಕ್ತರಿಗಾಗಿ ದೊಡ್ಡ ಬಿಡಾರವೇ ತೆರೆದುಕೊಂಡಿದೆ. ಮೂಡಿಗೆರೆ ಸಾಮಾಜಿಕ ಸೇವಾ ಸಂಸ್ಥೆಯಿಂದ ಪ್ರತಿ ವರ್ಷ ಈ ಕಾರ್ಯ ಮಾಡಲಾಗುತ್ತಿದೆ. ಊಟದ ವ್ಯವಸ್ಥೆ ಜತೆಗೆ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಸದ್ಧೀಕ್ಷಾ ಚಾರಿಟಬಲ್ ಟ್ರಸ್ಟ್‌ನ ಸ್ವಯಂ ಸೇವಕರು ಪಾದಯಾತ್ರಿಗಳ ಕಾಲಿಗೆ ನೋವು ನಿವಾರಕ ತೈಲ ಹಚ್ಚಿ ಮಸಾಜ್ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ವೈದ್ಯರನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಈ ಸ್ಥಳದಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿದೆ. ಕೊಟ್ಟಿಗೆಹಾರ ದಾಟಿದ ಬಳಿಕ ಎಲ್ಲಿಯೂ ಪ್ಲಾಸ್ಟಿಕ್ ಬಾಟಲಿ ಎಸೆಯದಂತೆ ಅರಣ್ಯ ಇಲಾಖೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಕಲು ಚೀಲಗಳನ್ನು ಅಳವಡಿಸಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿದೆ. ಆದರೂ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿವೆ. ಶಿವರಾತ್ರಿ ಬಳಿಕ ಸ್ವಚ್ಛಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ರಸ್ತೆಯುದ್ದಕ್ಕೂ ಬಯಲೇ ಶೌಚಾಲಯ

ಪಾದಯಾತ್ರಿಗಳು ಸಾಗುತ್ತಿರುವ ರಸ್ತೆಯುದ್ದಕ್ಕೂ ಬಯಲೇ ಶೌಚಾಲಯವಾಗಿದ್ದು ಮಹಿಳೆಯರು ಮುಜುಗರದ ನಡುವೆ ಬಯಲಲ್ಲೇ ಶೌಚ ಮಾಡುವ ಅನಿವಾರ್ಯತೆ ಇದೆ. ರಸ್ತೆ ಬದಿಯಲ್ಲಿ ತೆರೆಮರೆ ಹುಡುಕಿ ಶೌಚಕ್ಕೆ ತೆರಳುತ್ತಿದ್ದಾರೆ. ಮನೆಯಿಂದ ಹೊರಟರೆ ಧರ್ಮಸ್ಥಳ ತಲಪುವ ತನಕ ಊಟ ಉಪಾಹಾರ ಮತ್ತು ನೀರಿಗೆ ಒಂದು ರೂಪಾಯಿ ಕೂಡ ಖರ್ಚಾಗುವುದಿಲ್ಲ. ಆದರೆ ಎಲ್ಲಿಯೂ ಶೌಚಾಲಯ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದರು. ‘ರಸ್ತೆ ಬದಿಯ ಮನೆಯೊಂದರಲ್ಲಿ ಶೌಚಾಲಯಕ್ಕೆ ಹೋಗಲು ಪ್ರಯತ್ನ ಮಾಡಿದೆವು ಕಟ್ಟಿರುವ ನಾಯಿ ಬಿಚ್ಚಿ ಬಿಡುವುದಾಗಿ ಆ ಮನೆಯೊಡತಿ ಎಚ್ಚರಿಸಿದರು. ವಾಪಸ್ ಬಂದು ರಸ್ತೆ ಬದಿಯಲ್ಲಿ ಶೌಚ ಮಾಡುವುದು ಅನಿವಾರ್ಯವಾಯಿತು’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ‘ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಇದ್ದಿದ್ದರೆ ಅನುಕೂಲ ಆಗುತ್ತಿತ್ತು’ ಎಂದರು.

ಭಕ್ತರೊಂದಿಗೆ ಸಾಗುವ ನಾಯಿ

ನಾಯಿಯೊಂದು ಕಳೆದ ಮೂರು ವರ್ಷಗಳಿಂದ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುಂಭೇನಹಳ್ಳಿಯ ಪಾಂಡು ಅವರು ಹಲವು ವರ್ಷಗಳಿಂದ ಶಿವರಾತ್ರಿ ವೇಳೆ ಧರ್ಮಸ್ಥಳಕ್ಕೆ ನಡೆದು ಸಾಗುತ್ತಾರೆ. ಅವರೊಂದಿಗೆ ಅವರ ಸಾಕುನಾಯಿ ಮೂರನೇ ಬಾರಿಗೆ ತೆರಳುತ್ತಿದೆ. ಧರ್ಮಸ್ಥಳ ತಲುಪಿ ದೇವರ ದರ್ಶನಕ್ಕೆ ಪಾಂಡು ಅವರು ತೆರಳಿದ ಬಳಿಕ ಅಲ್ಲಿಂದ ನಾಪತ್ತೆಯಾಗುವ ನಾಯಿ ಅದೇ ದಾರಿಯಲ್ಲಿ ವಾಪಸ್ ಊರಿನತ್ತ ಸಾಗುತ್ತದೆ. ‘ನಾನು ಬಸ್‌ನಲ್ಲಿ ವಾಪಸ್ ಹೋಗುತ್ತೇನೆ. 10ರಿಂದ 12 ದಿನಗಳಲ್ಲಿ ನಾಯಿ ಮನೆಗೆ ಬರುತ್ತೆ’ ಎಂದು ಪಾಂಡು ‘ಪ್ರಜಾವಾಣಿ’ಗೆ ವಿವರಿಸಿದರು.

ಎರಡು ವರ್ಷಗಳಿಂದ ಪಾದಯಾತ್ರೆ ಬರುತ್ತಿದ್ದೇನೆ. ಭಕ್ತರಿಗೆ ಎಲ್ಲರಿಯೂ ಕೊರತೆಯಾಗದಂತೆ ಜನ ನೋಡಿಕೊಳ್ಳುತ್ತಾರೆ. ಶೌಚದ್ದೇ ದೊಡ್ಡ ಸಮಸ್ಯೆ. ತಾತ್ಕಾಲಿಕ ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸಿದರೆ ಅನುಕೂಲ
ರುಚಿತಾ ಯಡೂರು, ಹಾಸನ.
ಇದೇ ಮೊದಲ ಬಾರಿಗೆ ಪಾದಯಾತ್ರೆ ಬಂದಿದ್ದೇನೆ. ಎಲ್ಲರೊಂದಿಗೆ ಒಟ್ಟಿಗೆ ಸಾಗುತ್ತಿರುವುದರಿಂದ ಉತ್ಸಾಹ ಜಾಸ್ತಿ ಇದೆ. ಭಕ್ತರಿಗೆ ಊಟ ನೀರು ವಿತರಿಸುತ್ತಿರುವ ಜನರನ್ನು ಕಂಡರೆ ಉತ್ಸಾಹ ಇನ್ನೂ ಹೆಚ್ಚುತ್ತಿದೆ.
ಭೂಮಿಕಾ ಚೌಡನಹಳ್ಳಿ, ಚನ್ನಾರಾಯಪಟ್ಟಣ
ಭಕ್ತರೊಂದಿಗೆ ಧರ್ಮಸ್ಥಳದತ್ತ ಸಾಗುತ್ತಿರುವ ನಾಯಿ 
ಶಿವರಾತ್ರಿಯಂದು ಮಂಜುನಾಥಸ್ವಾಮಿಯ ದರ್ಶನ ಪಡೆಯಲು ಧರ್ಮಸ್ಥಳದತ್ತ ಹೊರಟಿರುವ ಭಕ್ತರಿಗೆ ನೋವು ನಿವಾರಕ ತೈಲ ಹಚ್ಚಿ ಮಸಾಜ್  ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.