ಚಿಕ್ಕಮಗಳೂರು: ಮಲೆನಾಡಿನ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಸ್ಯಾಟಲೈಟ್ ಲಿಂಕ್ ಆಧಾರಿತ ಟವರ್ ನಿರ್ಮಿಸಿ ನೆಟ್‌ವರ್ಕ್ ಕಲ್ಪಿಸಲು ದೂರ ಸಂಪರ್ಕ ಇಲಾಖೆ ಮುಂದಾಗಿದೆ. ಮೊದಲ ಬಾರಿಗೆ ಮೂಡಿಗೆರೆ ತಾಲ್ಲೂಕಿನ ಆಲೆಕಾನ್ ಹೊರಟ್ಟಿಯಲ್ಲಿ ಪ್ರಾಯೋಗಿಕವಾಗಿ ಈ ಪ್ರಯತ್ನ ನಡೆಯುತ್ತಿದೆ.
ಮಲೆನಾಡಿನಲ್ಲಿ ಸಣ್ಣ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿಯೇ ಇದೆ. ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಯಾವ ಕಂಪನಿಯ ನೆಟ್‌ವರ್ಕ್ ಕೂಡ ಇಲ್ಲ. ಆದ್ದರಿಂದ ಅಲ್ಲಲ್ಲಿ ಬಿಎಸ್‌ಎನ್‌ಎಲ್ ಟವರ್ ಅಳವಡಿಸಬೇಕು ಎಂಬ ಕೂಗ ಹಲವು ವರ್ಷಗಳಿಂದ ಇದೆ. ಇದು ಹೋರಾಟದ ರೂಪವನ್ನೂ ಪಡೆದುಕೊಂಡಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದ್ದಾರೆ. ಅದರ ಫಲವಾಗಿ ಈಗ ದೂರ ಸಂಪರ್ಕ ಇಲಾಖೆ ಪ್ರಾಯೋಗಿಕ ಹೆಜ್ಜೆ ಇಟ್ಟಿದೆ. ಮೂಡಿಗೆರೆ ತಾಲ್ಲೂಕನ ಕೊಟ್ಟಿಗೆಹಾರ ಸಮೀಪದ ಆಲೆಕಾನ್ ಹೊರಟ್ಟಿಯಲ್ಲಿ ಸ್ಯಾಟಲೈಟ್ ಲಿಂಕ್ ಆಧರಿತ ಟವರ್ ನಿರ್ಮಿಸಲಾಗಿದೆ. ಉತ್ತರ ಕನ್ನಡ, ರಾಮನಗರ ಜಿಲ್ಲೆಯಲ್ಲಿ ಈ ಪ್ರಯತ್ನಗಳು ನಡೆದಿದ್ದು, ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಲೆಕಾನು ಹೊರಟ್ಟಿಯಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಈಗಾಗಲೇ ಸ್ಥಾಪಿಸಿರುವ ಮೊಬೈಲ್ ಟವರ್‌ಗೆ ಉಪಕರಣವೊಂದನ್ನು ಜೋಡಿಸಲಾಗುತ್ತದೆ. ಈ ಉಪಕರಣ ನೇರವಾಗಿ ಸ್ಯಾಟಲೈಟ್‌ಗೆ ಸಂಪರ್ಕ ಹೊಂದಲಿದೆ. ಆದ್ದರಿಂದ ನೆಟ್‌ವರ್ಕ್ ಸಮಸ್ಯೆ ಇರುವುದಿಲ್ಲ. ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ದೊರಕುವುದರಿಂದ ವಿಡಿಯೊ ಕಾಲ್ ಮತ್ತು ವಾಯ್ಸ್ ಕಾಲ್ ಮಾಡಲು ಅನುಕೂಲವಾಗಲಿದೆ. ಆದರೆ, ಒಂದು ಕಿ.ಮೀ ವ್ಯಾಪ್ತಿಗಷ್ಟೇ ಈ ಸಂಪರ್ಕ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎಷ್ಟೇ ಮಳೆ ಮತ್ತು ಗಾಳಿ ಇದ್ದರೂ ನೆಟ್‌ವರ್ಕ್ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಕರೆ ಕನೆಕ್ಟ್ ಅಗಲು 12 ಸೆಕೆಂಡ್ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಕರೆ ಮಾಡಲು ತೊಂದರೆಯಾಗಿಲ್ಲ. ಜನ ಬಳಕೆಗೆ ನೀಡಿದ ಬಳಿಕ ಎನೆಲ್ಲಾ ಸವಾಲುಗಳು ಬರಲಿವೆ ಎಂಬುದನ್ನು ಪರಿಶೀಲಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಸದ್ಯಕ್ಕೆ ನೆಟ್‌ವರ್ಕ್ ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಯಾಟಲೈಟ್ ಲಿಂಕ್ ಆಧಾರಿತ ಸೌಲಭ್ಯವನ್ನು ಜಾರಿಗೊಳಿಸಲಾಗುತ್ತಿದೆ. ಇದರ ಜತೆಗೆ ಟವರ್ ಅಗತ್ಯವಿಲ್ಲದ ನೇರವಾಗಿ ಸ್ಯಾಟಲೈಟ್ ಜತೆಗೆ ಸಂಪರ್ಕ ಸಾಧಿಸಬಲ್ಲ ಸ್ಯಾಟಲೈಟ್ ಫೋನ್‌ಗಳನ್ನು ಪರಿಚಯಿಸುವ ಪ್ರಯತ್ನವನ್ನೂ ದೂರ ಸಂಪರ್ಕ ಇಲಾಖೆ ಮಾಡುತ್ತಿದೆ. ಈ ಯೋಜನೆ ಜಾರಿಗೆ ಬಂದರೆ, ಗುಡ್ಡಗಾಡು ಪ್ರದೇಶ ಮತ್ತು ನಕ್ಸಲ್ ಚಟುವಟಿಕೆ ಇರುವುದರಿಂದ ಚಿಕ್ಕಮಗಳೂರು ಜಿಲ್ಲೆಯನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂಬ ಬೇಡಿಕೆಯನ್ನೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.