ADVERTISEMENT

ಪರಿಸರ ಸೂಕ್ಷ್ಮ ವಲಯಕ್ಕೆ ಆಕ್ಷೇಪಣೆ ಸಲ್ಲಿಕೆ; ಸಿಎಂ ಸಕಾರಾತ್ಮಕ ಸ್ಪಂದನೆ

ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:14 IST
Last Updated 25 ಅಕ್ಟೋಬರ್ 2020, 8:14 IST
ಡಿ.ಎನ್‌.ಜೀವರಾಜ್‌
ಡಿ.ಎನ್‌.ಜೀವರಾಜ್‌   

ನರಸಿಂಹರಾಜಪುರ: ‘ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ’ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಪರಿಸರ ಸೂಕ್ಷ್ಮ ವಲಯದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದಂತೆ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ 22ರಂದು ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಮಲೆನಾಡು ರೈತರ ಹಿತರಕ್ಷಣಾ ಸಮಿತಿಯ ನಿಯೋಗದ ಸಭೆಯಲ್ಲಿ, ಭದ್ರಾ ನದಿಯ ಗಡಿಯನ್ನೇ ಪರಿಸರ ಸೂಕ್ಷ್ಮವಲಯದ ಗಡಿ ನಿಗದಿಪಡಿಸಬೇಕು. ಹೊಳೆಯಿಂದ ಈಚೆ ಫಲವತ್ತಾದ ಜಮೀನಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅಧಿಸೂಚನೆ ಹೊರಡಿಸಿರುವುದರಿಂದ ಏನಾಗುತ್ತದೆ ಎಂಬುದು ಗೊತ್ತಿಲ್ಲ; ಪ್ರಯತ್ನ ಒಳ್ಳೆಯದಾಗಿದೆ’ ಎಂದರು.

‘ಅನಾರೋಗ್ಯದ ಕಾರಣ ಅರಣ್ಯ ಸಚಿವರು ಸಭೆಗೆ ಹಾಜರಾಗಿಲ್ಲ. 2011ರ ಡಿಸೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 7 ಹುಲಿ ಯೋಜನೆಗಳಲ್ಲಿ ಭದ್ರಾ ಹುಲಿಯೋಜನೆ ಬಿಟ್ಟು ಉಳಿದ 5 ಹುಲಿಯೋಜನೆಗೆ ಅನುಮತಿ ನೀಡಲಾಗಿತ್ತು. 2016ರಲ್ಲಿ ಭದ್ರಾ ಹುಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಸದನದ ಉಪಸಮಿತಿ ಒಪ್ಪಿಗೆ ಸೂಚಿದೆ. ಬಫರ್ ಝೋನ್ ಜಾರಿಗೊಳಿಸಲು 2008ರಲ್ಲಿಯೇ 5 ಗ್ರಾಮ ಪಂಚಾಯಿಯವರು ಒಪ್ಪಿಗೆ ನೀಡಿದ್ದಾರೆ’ ಎಂದರು.

ADVERTISEMENT

‘ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ರೈತರಿಂದ ಹಾಗೂ ಗ್ರಾಮಸ್ಥರಿಂದ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಕ್ಕೂ ಬಂದು ನೇರವಾಗಿ ಆಕ್ಷೇಪಣಾ ಅರ್ಜಿ ಸ್ವೀಕರಿಸಬೇಕು. ಇಲ್ಲದಿದ್ದರೆ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆಂದು ಈ ಹಿಂದೆ ಆಗ್ರಹಿಸಲಾಗಿತ್ತು. ನಿಯೋಗದ ಸಭೆಯಲ್ಲಿ ನೇರವಾಗಿ ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಬೇಕೆಂದು ಮುಖ್ಯಮಂತ್ರಿಗಳು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಇದು ತಮಗೆ ಸಿಕ್ಕ ಮೊದಲ ಜಯವಾಗಿದೆ’ ಎಂದರು.

ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಆಕ್ಷೇಪಣೆ ಅರ್ಜಿ ಸ್ವೀಕರಿಸಲು ತಾಲ್ಲೂಕು ಹಾಗೂ ಹೋಬಳಿ ಕೇಂದ್ರಕ್ಕೆ ಭೇಟಿ ನೀಡುವ ದಿನಾಂಕವನ್ನು ಮುಂಚಿತವಾಗಿ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುವುದು ಎಂದರು.

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅಶ್ವನ್, ಹೋಬಳಿ ಘಟಕದ ಅಧ್ಯಕ್ಷ ಲೋಕೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್, ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪರ್ವಿಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.