ADVERTISEMENT

ಬಯಲು ಸೀಮೆ | ಕುಡಿವ ನೀರಿಗೆ ಕಡುಕಷ್ಟ; ಟ್ಯಾಂಕರ್‌ ಮೂಲಕ ಜೀವಜಲ ಪೂರೈಕೆ

ಅಜ್ಜಂಪುರ, ತರೀಕೆರೆ, ಚಿಕ್ಕಮಗಳೂರಿನಲ್ಲೂ ತೊಂದರೆ

ವಿಜಯಕುಮಾರ್ ಎಸ್.ಕೆ.
Published 29 ಏಪ್ರಿಲ್ 2024, 7:57 IST
Last Updated 29 ಏಪ್ರಿಲ್ 2024, 7:57 IST
<div class="paragraphs"><p>ಅಜ್ಜಂಪುರ ತಾಲ್ಲೂಕಿನ ದುಂದೂರು ಗ್ರಾಮದಲ್ಲಿ ‌ಕುಡಿವ ನೀರನ್ನು ಟ್ಯಾಂಕರ್ ನಲ್ಲಿ ಪೂರೈಸುತ್ತಿರುವುದು</p></div>

ಅಜ್ಜಂಪುರ ತಾಲ್ಲೂಕಿನ ದುಂದೂರು ಗ್ರಾಮದಲ್ಲಿ ‌ಕುಡಿವ ನೀರನ್ನು ಟ್ಯಾಂಕರ್ ನಲ್ಲಿ ಪೂರೈಸುತ್ತಿರುವುದು

   

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬರಗಾಲದ ನಡುವೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಳ್ಳಿ–ಹಳ್ಳಿಯಲ್ಲಿ ನೀರಿನ ಭವಣೆ ಹೆಚ್ಚಾಗುತ್ತಿದ್ದು, ಜಲ ಜೀವನ್ ಮಷಿನ್ ಯೋಜನೆಯಡಿ ಮನೆ ಮನೆಗೆ ನೀರೊದಗಿಸುವ ಜಲೋತ್ಸವಕ್ಕೂ ಕಂಟಕ ಎದುರಾಗಿದೆ.

ಇಡೀ ಜಿಲ್ಲೆ ಬರಗಾಲದಿಂದ ಸಂಕಷ್ಟಕ್ಕೆ ಸಿಲಿಕಿದೆ. ಕೆರೆಗಳು, ನದಿಗಳು ಸೇರಿ ಎಲ್ಲಾ ಜಲಮೂಲಗಳೂ ಬತ್ತಿ ಹೊಗಿವೆ. ಅದರಲ್ಲೂ ಬಯಲು ಸೀಮೆಯ ತರೀಕೆರೆ, ಕಡೂರು, ಅಜ್ಜಂಪುರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಂತರ್ಜಲ ಮಟ್ಟವಂತೂ ಹಿಂದೆಂದೂ ಕಾಣದಷ್ಟು ಪಾತಳಕ್ಕೆ ತಲುಪಿದೆ. ಸಾವಿರ ಅಡಿ ಕೊರೆದರೂ ಕೊಳವೆ ಬಾವಿಗಳಿಗೆ ನೀರು ಸಿಗುತ್ತಿಲ್ಲ.

ADVERTISEMENT

ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ನೀರು ಮಾತ್ರ ಮನೆ ಸೇರಿಲ್ಲ. ಜೆಜೆಎಂ ಪೈಪ್‌ಲೈನ್‌ಗೂ ನೀರಿನ ಕೊರತೆ ಎದುರಾಗಿದೆ. ಕೊಳವೆ ಬಾವಿಗಳು ಬತ್ತಿ ಹೋಗಿರುವುದು ಎಲ್ಲಡೆ ಸಮಸ್ಯೆಯಾಗಿ ಕಾಡುತ್ತಿದೆ.

ಮೊದಲ ಹಂತದಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 192 ಕಾಮಗಾರಿಗಳು, ಕಳಸದಲ್ಲಿ 20, ಕಡೂರಿನಲ್ಲಿ 10, ಕೊಪ್ಪದಲ್ಲಿ 75, ಮೂಡಿಗೆರೆಯಲ್ಲಿ 45, ನರಸಿಂಹರಾಜಪುರದಲ್ಲಿ ಶಾಸ 64, ಶೃಂಗೇರಿಯಲ್ಲಿ 21 ಜೆಜೆಎಂ ಕಾಮಗಾರಿಗಳನ್ನು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೆತ್ತಿಕೊಂಡಿದೆ. ಈ ಎಲ್ಲ ಕುಡಿವ ನೀರಿನ ಕಾಮಗಾರಿಗಳಿಗೂ ತಾತ್ಕಾಲಿಕವಾಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಉದ್ದೇಶಿಸಲಾಗಿದೆ. 

ಕೊಳವೆ ಬಾವಿಗಳಲ್ಲಿ ನೀರಿಲ್ಲ. ಇನ್ನೊಂದೆಡೆ ಭದ್ರಾ ಜಲಾಶಯ, ಝರಿಗಳಿಂದಲೂ ನೀರು ಪೂರೈಸಲು ಉದ್ದೇಶಿಸಲಾಗಿದೆ. ಬರಗಾಲ ಇರುವುದರಿಂದ ಯಾವ ಜಲಮೂಲದಲ್ಲೂ ನೀರಿಲ್ಲವಾಗಿದೆ. 

ತರೀಕೆರೆ, ಅಜ್ಜಂಪುರ, ಶಿವನಿ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಜೆಜೆಎಂ ಯೋಜನೆಗೂ ಸಮಸ್ಯೆಯಾಗುತ್ತಿದೆ. ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಅಗತ್ಯ ಬಿದ್ದರೆ ಕೊಳವೆ ಬಾವಿ ಕೊರೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಭದ್ರಾ ಯೋಜನೆ: ಅರಣ್ಯ ಅನುಮತಿಯೇ ತೊಡಕು

ಭದ್ರಾ ಯೋಜನೆಯಡಿ ಪಟ್ಟಣ ಮತ್ತು ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ಪಡೆಯುವುದೇ ದೊಡ್ಡ ತೊಡಕಾಗಿದೆ. ಪೈಪ್‌ಲೈನ್ ಸಾಗುವ ದಾರಿಯಲ್ಲಿ 50 ಎಕರೆಯಷ್ಟು ಅರಣ್ಯ ಜಾಗದ ಅನುಮತಿ ಬೇಕಿದೆ. ಅರಣ್ಯ ಇಲಾಖೆ ಅನುಮತಿ ನೀಡಬೇಕೆಂದರೆ ಪರ್ಯಾಯವಾಗಿ 50 ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕಿದೆ. ‘ಕುಡಿಯುವ ನೀರಿನ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣ ಅರಣ್ಯ ಜಾಗ ಬೇಕಿರುವುದು ರಾಜ್ಯದಲ್ಲೇ ಮೊದಲು. ಎರಡೂ ಇಲಾಖೆಗಳ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದ್ದೇವೆ. ಪರ್ಯಾಯ ಜಾಗ ಕೊಡಲು ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ’ ಎಂದು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

407 ಹಳ್ಳಿಗಳಲ್ಲಿ ನೀರಿಗೆ ತೊಂದರೆ

ಜಿಲ್ಲೆಯಲ್ಲಿ 407 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಗುರುತಿಸಿದ್ದಾರೆ. ಸದ್ಯಕ್ಕೆ 38 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಜ್ಜಂಪುರ ತಾಲ್ಲೂಕಿನ 20, ಚಿಕ್ಕಮ ಗಳೂರು ತಾಲ್ಲೂಕಿನ 12 ಮತ್ತು ತರೀಕೆರೆ ತಾಲ್ಲೂಕಿನ 6 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಾಯಕ ಹುಲ್ಲೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.