ADVERTISEMENT

ನರಸಿಂಹರಾಜಪುರ | 'ಮಾದಕವಸ್ತು ಮೋಹಕವಲ್ಲ; ಮಾರಕ'

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:58 IST
Last Updated 10 ಅಕ್ಟೋಬರ್ 2025, 5:58 IST
ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕವಸ್ತುಗಳ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಧನಂಜಯ ಚಾಲನೆ ನೀಡಿದರು
ನರಸಿಂಹರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕವಸ್ತುಗಳ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಧನಂಜಯ ಚಾಲನೆ ನೀಡಿದರು   

ನರಸಿಂಹರಾಜಪುರ: ಮಾದಕವಸ್ತುಗಳ ಸೇವನೆ ಮೋಹಕವಲ್ಲ; ಅದು ಜೀವಕ್ಕೆ ಮಾರಕ ಎಂದು ಚಿಕ್ಕಮಗಳೂರು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಆರ್.ದಿನೇಶ್ ಹೇಳಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಮಾದಕ ವಸ್ತುಗಳು ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಅವರು ಮಾಹಿತಿ ನೀಡಿದರು.

ಭಾರತದಲ್ಲಿ 27.50 ಕೋಟಿಯಷ್ಟು ಜನ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ರಾಜ್ಯದಲ್ಲಿ 1.25 ಕೋಟಿ ಜನ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ದೇಶದಲ್ಲಿ ಪ್ರತಿ ದಿನ 2,500 ವಿದ್ಯಾರ್ಥಿಗಳು ತಂಬಾಕು ಮತ್ತು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇದರಲ್ಲಿ 13ರಿಂದ 16ವರ್ಷದ ಮಕ್ಕಳು ಹೆಚ್ಚಾಗಿ ತಂಬಾಕು ಉತ್ಪನ್ನಗಳಿಗೆ ದಾಸಾಗುತ್ತಿದ್ದಾರೆ ಎಂದರು.

ADVERTISEMENT

1 ಸಿಗರೇಟ್‌ನಲ್ಲಿ 7ಸಾವಿರಕ್ಕೂ ಅಧಿಕ ರಾಸಾಯನಿಕಗಳಿವೆ. ನಿಕೊಟಿನ್ ವ್ಯಸನ ಆಲ್ಕೋಹಾಲ್‌ಗಿಂತ ಸಾವಿರಪಟ್ಟು ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯಸಂಬಂಧಿ ಕಾಯಿಲೆಗಳು, ಶ್ವಾಸಕೋಶ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಧನಂಜಯ ಮಾತನಾಡಿ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಓದಿನ ಕಡೆ ಗಮನಹರಿಸಬೇಕು ಎಂದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಸಾರ್ಥಕ್ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಸತೀಶ್, ರೇಜರ್ಸ್ ರೋವರ್ಸ್ ಘಟಕದ ಸಂಚಾಲಕ ಚಂದ್ರಪ್ಪ, ಐಕ್ಯುಎಸಿ ಸಂಚಾಲಕ ಪ್ರಸಾದ್, ಜೇಸಿ ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಗೌಡ, ಸಪ್ತಾಹದ ನಿರ್ದೇಶಕ ಜೋಯಿ, ಪವನ್ ಕರ್, ಸುಹಾಸ್, ಅಜಯ್, ಉದಯ್ ಗಿಲ್ಲಿ, ತಂಬಾಕು ನಿಯಂತ್ರಣ ಕೋಶದ ರಾಘವೇಂದ್ರ, ವಿದ್ಯಾರ್ಥಿಗಳಾದ ಸಂಧ್ಯಾ, ಸ್ಫೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.