
ನರಸಿಂಹರಾಜಪುರ: ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ) ಭೂಮಿ ಹಕ್ಕಿಗಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ರಾಜ್ಯದಲ್ಲಿ ಬಡವರ ಹಸಿವು ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿಗೆ ತಂದಂತೆ ದಲಿತರಿಗೆ ಭೂಮಿಯ ಹಕ್ಕು ಯೋಜನೆ ಜಾರಿಗೆ ತರಲಿ ಎಂದು ಆಗ್ರಹಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಮೈಸೂರಿನ ಕೆ.ನಂಜಪ್ಪ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಅವರು ಭೂಮಿ ಹೋರಾಟ ಮಾಡಿದ ಫಲವಾಗಿ ಭೂ ಪರಬಾರೆ ಕಾಯಿದೆ ಜಾರಿಗೆ ಬಂದಿತು. ಆದ್ದರಿಂದ ನಮಗೆ ಭೂಮಿ ಕೊಡುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸಂಘಟನಾ ಸಂಚಾಲಕರಾದ ವಿಜಯನಗರದ ಪಿ.ದುರ್ಗಾದಾಸ್ ಮಾತನಾಡಿ, ಭೂಮಿ ಸಿಗುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲಾ ಸಂಚಾಲಕರಾದ ಓಂಕಾರ ಮೂರ್ತಿ ಮಾತನಾಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ನೂರುಲ್ ಹುದಾ, ಮಾತನಾಡಿ, ಪ್ರತಿಭಟನೆ ಮಾಡುತ್ತಿರುವವರು ತಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಮನವಿ ಪತ್ರವನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ರಾಜ್ಯ ಸಮಿತಿ ಸದಸ್ಯರಾದ ಎಸ್. ರಾಜೇಶ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ.ಭವಾನಿ, ತಾಲ್ಲೂಕು ಸಂಚಾಲಕದ ಎಂ.ಜೆ ಸಿಜು,ಸಂಘಟನಾ ಸಂಚಾಲಕ ಮೃತ್ಯುಂಜಯ, ಎಸ್.ರಾಜು, ಜಯರಾಮ್, ಖದೀರ್, ರವಿ,ಕುಮಾರ ತಿಮ್ಮಯ್ಯ, ವಾಸಂತಿ, ವೆನಿಲಾ, ರೇಣುಕಾ,ಶೋಭಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.