ADVERTISEMENT

ಬೀರೂರು: ಗರಿಗೆದರಿದ ರಾಜಕೀಯ ಚಟುವಟಿಕೆ

ಬೀರೂರು ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

ಎನ್‌.ಸೋಮಶೇಖರ
Published 10 ಅಕ್ಟೋಬರ್ 2020, 11:43 IST
Last Updated 10 ಅಕ್ಟೋಬರ್ 2020, 11:43 IST
 ಬೀರೂರು ಪುರಸಭೆ
 ಬೀರೂರು ಪುರಸಭೆ   

ಬೀರೂರು: ಪುರಸಭೆಗೆ ಚುನಾವಣೆ ನಡೆದು ವರ್ಷಗಳು ಕಳೆದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪರಿಷ್ಕೃತಗೊಂಡು ಪ್ರಕಟವಾಗಿದ್ದು, ಆಯ್ಕೆಯಾದ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಮಧ್ಯೆ ಗಾದಿಗಾಗಿ ಲೆಕ್ಕಾಚಾರ ಮತ್ತು ಪೈಪೋಟಿ ಆರಂಭವಾಗಿದೆ.

ಚುನಾವಣೆಗೆ ಮುನ್ನವೇ ಮೀಸಲು ಪ್ರಕಟಗೊಂಡು ಅಧ್ಯಕ್ಷ ಹುದ್ದೆ ಎಸ್‍ಸಿ ಮಹಿಳೆಗೆ ಎಂದು ನಿಗದಿಯಾಗಿತ್ತು. ಚುನಾವಣೆ ಮುಗಿದ ಬಳಿಕವೂ ಈ ಪಟ್ಟಿ ಏನೂ ಬದಲಾಗಿರಲಿಲ್ಲ. ಇದೇ ಆಧಾರದಲ್ಲಿ ಪಕ್ಷೇತರವಾಗಿ ಆಯ್ಕೆಯಾಗಿದ್ದ ಸದಸ್ಯೆಯೊಬ್ಬರು ಬಿಜೆಪಿ ಸೇರ್ಪಡೆಗೊಂಡು, ಅಧ್ಯಕ್ಷ ಸ್ಥಾನ ಹಿಡಿಯಲು ಆ ಪಕ್ಷಕ್ಕೆ ಕೊರತೆಯಾಗಿದ್ದ ಮತವನ್ನೂ ಭರ್ತಿ ಮಾಡುವ ಜತೆಗೆ ಅದೇ ಪಕ್ಷದಿಂದ ಆಯ್ಕೆಯಾಗಿದ್ದ ಮತ್ತೊಬ್ಬ ಸದಸ್ಯೆಯ ಜತೆ ಅಘೋಷಿತ ಪೈಪೋಟಿಯನ್ನೂ ನಡೆಸಿದ್ದರು. ಆದರೆ, ಈಗ ಹೊಸದಾಗಿ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮತ್ತು ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ’ ಮಹಿಳೆಗೆ ಮೀಸಲಾಗಿದೆ. ಇದರಲ್ಲಿ ಪರಿಶಿಷ್ಟರಿಗೆ ಯಾವುದೇ ಲಾಭ ಈಗ ಇಲ್ಲದಿದ್ದರೂ ಅವರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಈಗಾಗಲೇ ಹಲವು ಮಾನದಂಡಗಳನ್ನು ಬಳಸಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.

ಚುನಾವಣೆ ಮುಗಿದಾಗ 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 9 ಮತ್ತು ಜೆಡಿಎಸ್ ಹಾಗೂ ಪಕ್ಷೇತರರು ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಅಧಿಕಾರಕ್ಕೆ ಹತ್ತಿರವಿದ್ದ ಬಿಜೆಪಿ ಶಾಸಕರ ಒತ್ತಾಸೆಯಿಂದ ಇಬ್ಬರೂ ಪಕ್ಷೇತರರನ್ನು ತನ್ನಡೆಗೆ ಸೆಳೆದುಕೊಳ್ಳಲು ಯಶಸ್ವಿಯಾಗಿತ್ತು. ಇದಕ್ಕೆ ಮೊದಲು ಕಾಂಗ್ರೆಸ್ ಮುಖಂಡರು ಪಕ್ಷೇತರ ಸದಸ್ಯೆಯ ಪತಿಯ ಮೂಲಕ ಕಾಂಗ್ರೆಸ್‍ಗೆ ಬೆಂಬಲ ಘೋಷಣೆ ಮಾಡಿಸಿದ್ದರೂ, ನಂತರದ ಬೆಳವಣಿಗೆಗಳಲ್ಲಿ ಖುದ್ದು ಸದಸ್ಯೆಯೇ ಬಿಜೆಪಿಗೆ ಬೆಂಬಲ ಘೋಷಿಸುವ ಮೂಲಕ ಇದೇ ಮೊದಲ ಬಾರಿಗೆ ಬೀರೂರು ಪುರಸಭೆಯಲ್ಲಿ ಬಹುಮತದೊಂದಿಗೆ ಆ ಪಕ್ಷ ಗದ್ದುಗೆ ಏರಲು ಏಣಿಯಾಗಿದ್ದಾರೆ.

ADVERTISEMENT

ಮೂರನೇ ಬಾರಿ ಗೆಲುವು ಸಾಧಿಸಿರುವ ಎಂ.ಪಿ.ಸುದರ್ಶನ್ ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿ. ನಂತರದಲ್ಲಿ ಎರಡನೇ ಬಾರಿ ಆಯ್ಕೆಯಾಗಿರುವ ಎನ್.ಎಂ. ನಾಗರಾಜ್ ಬಿಜೆಪಿ ಕಟ್ಟಾಳುವಾಗಿದ್ದು, ಅಧಿಕಾರ ಹಂಚಿಕೆ ಸೂತ್ರ ನಡೆದರೆ ಮುಂದಿನ ದಿನಗಳಲ್ಲಿ ಅವಕಾಶ ಲಭ್ಯವಾಗಬಹುದು. ಇದೇ ಮೊದಲ ಬಾರಿಗೆ ಇಲ್ಲಿ ಅಲ್ಪಸಂಖ್ಯಾತರೊಬ್ಬರು ಕಮಲ ಚಿಹ್ನೆಯಡಿ ಆಯ್ಕೆಯಾಗಿದ್ದು ನಾಯಕರು, ಮುಖಂಡರು ಮನಸ್ಸು ಮಾಡಿದರೆ ಮಾನಿಕ್ ಬಾಷಾ ಮೂರನೇ ಅವಧಿಯಲ್ಲಿ ಅಧ್ಯಕ್ಷರಾಗಬಹುದು. ಮಹಿಳೆಯರನ್ನು ಅಧ್ಯಕ್ಷ ಗಾದಿಗೆ ಪರಿಗಣಿಸುವುದಾದರೆ ಸಹನಾ ಸಾಕಮ್ಮ ಅಥವಾ ಭಾಗ್ಯಲಕ್ಷ್ಮಿ ಮೋಹನ್ ಅವಕಾಶ ಪಡೆಯಬಹುದು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನದಿಂದ ವಂಚಿತರಾದವರಿಗೆ ಇಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಗಳೂ ಇವೆ. ಮುಂದುವರಿದು ಕಡೂರಿನಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆದರೆ, ಬೀರೂರು ಪುರಸಭೆಯಲ್ಲಿಯೂ ಲೆಕ್ಕಾಚಾರ ನಡೆದು ಉಪಾಧ್ಯಕ್ಷ ಸ್ಥಾನ ಯಾರಿಗಾದರೂ ದಕ್ಕಬಹುದಾಗಿದೆ.

ಈ ಎಲ್ಲ ಲೆಕ್ಕಾಚಾರಗಳೂ ಕೂಡಾ ಅನುಷ್ಠಾನಕ್ಕೆ ಬರುವುದು ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಆಕ್ಷೇಪಣೆಗಳು ಕಂಡು ಬರದೆ, ಯಾರೂ ನ್ಯಾಯಾಲಯದ ಮೊರೆ ಹೋಗದೆ ಶೀಘ್ರವಾಗಿ ಜಿಲ್ಲಾಧಿಕಾರಿಗಳು ಚುನಾವಣಾ ಕ್ಯಾಲೆಂಡರ್ ಪ್ರಕಟಿಸಿದರೆ ಮಾತ್ರ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಪಾತ್ರವೂ ಪ್ರಮುಖವಾಗಿದೆ.

ಇನ್ನು ಕಾಂಗ್ರೆಸ್ ಕೂಡಾ ತೆರೆಮರೆಯ ಪ್ರಯತ್ನಗಳನ್ನು ನಡೆಸಿದ್ದು, ರಾಜಕೀಯವಾಗಿ ಏನಾದರೂ ಅನಿರೀಕ್ಷಿತಗಳು ಘಟಿಸಿದರೆ ಮಾತ್ರ ಚುನಾವಣೆ ನಡೆಯುವ ಸಾಧ್ಯತೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.