ADVERTISEMENT

ಗ್ರಾಮಸ್ಥರ ಜತೆ ಮನವೊಲಿಕೆ ಯತ್ನ ವಿಫಲ

ಚುನಾವಣೆ ಬಹಿಷ್ಕಾರ: ಜನರೊಂದಿಗೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 4:44 IST
Last Updated 7 ಡಿಸೆಂಬರ್ 2020, 4:44 IST
ಬಾಳೆಹೊನ್ನೂರು ಸಮೀಪದ ಸಂಗಮೇಶ್ವರ ಪೇಟೆ ಸಮುದಾಯಭವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
ಬಾಳೆಹೊನ್ನೂರು ಸಮೀಪದ ಸಂಗಮೇಶ್ವರ ಪೇಟೆ ಸಮುದಾಯಭವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು   

ಸಂಗಮೇಶ್ವರ ಪೇಟೆ (ಬಾಳೆಹೊನ್ನೂರು): ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಮಾಡಿರುವ ಖಾಂಡ್ಯ ಹೋಬಳಿಯಲ್ಲಿ ಗ್ರಾಮಸ್ಥರ ಜತೆ ಭಾನುವಾರ ಅಧಿಕಾರಿಗಳು ಮಾತುಕತೆ ನಡೆಸಿದರು. ಅಧಿಕಾರಿಗಳ ಮನವೊಲಿಕೆಗೆ ಗ್ರಾಮಸ್ಥರು ಜಗ್ಗಲಿಲ್ಲ.

ಉಪ ವಿಭಾಗಾಧಿಕಾರಿ ನಾಗರಾಜ್, ಕೊಪ್ಪ ಡಿವೈಎಸ್ಪಿ ರಾಜು ಸೇರಿದಂತೆ ಹಲವರು ಇಲ್ಲಿನ ಸಮುದಾಯ ಭವನದಲ್ಲಿ ಸೇರಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.

‘ಪಂಚಾಯಿತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಅಲ್ಲಿ ಸಮರ್ಥವಾಗಿ ಪರಿಹರಿಸಿಕೊಳ್ಳಬಹುದು. ಮತದಾನ ಬಹಿಷ್ಕಾರದಿಂದ ಅದು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿ’ ಎಂದು ಅಧಿಕಾರಿಗಳು ಮನವಿ ಮಾಡಿದರು.

ADVERTISEMENT

ಅಧಿಕಾರಿಗಳ ಮಾತಿಗೆ ಗ್ರಾಮಸ್ಥರು ಒಪ್ಪಲಿಲ್ಲ. ಮೊದಲು ಸಮಸ್ಯೆ ಬಗೆಹರಿಸಿ ಆಮೇಲೆ ಮಾತುಕತೆ ಮಾಡಿ. ಸಮಸ್ಯೆಯ ಗಂಭೀರತೆಯನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಬದುಕೇ ನಾಶವಾಗುತ್ತಿರುವ ಹೊತ್ತಿನಲ್ಲಿ ಸಂಧಾನ ಸಭೆಗಳೇಕೆ? ಮುಂದಿನ ದಿನಗಳಲ್ಲಿ ಯಾವುದೇ ಅಧಿಕಾರಿಗಳು ಸಭೆ ಕರೆದರೂ ನಾವು ಭಾಗವಹಿಸುವುದಿಲ್ಲ ಎಂಬ ಒಕ್ಕೊರಲಿನ ನಿರ್ಧಾರವನ್ನು ಖಾಂಡ್ಯ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ತಿಳಿಸಿದರು.

ಈ ಹಿಂದೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸಂಗಮೇಶ್ವರಪೇಟೆಗೆ ಬಂದು ಮನವೊಲಿಸಲು ಯತ್ನಿಸಿದ್ದರು. ಆಗಲೂ ಅವರು ವಿಫಲರಾಗಿದ್ದರು. ಸಭೆಯಲ್ಲಿ ಪಕ್ಷಗಳ ಮುಖಂಡರು, ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.