ADVERTISEMENT

ರಾಜ್ಯದಲ್ಲಿ ರೈಲ್ವೆ ಲೈನ್‌ಗಳ ವಿದ್ಯುದೀಕರಣ ಶೇ 97ರಷ್ಟು ಪೂರ್ಣ: ವಿ.ಸೋಮಣ್ಣ

ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 2:51 IST
Last Updated 3 ನವೆಂಬರ್ 2025, 2:51 IST
ಬೀರೂರು ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿ ಮಾತನಾಡಿದರು. ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಮೈಸೂರು ಡಿಆರ್‌ಎಂ ಮುದಿತ್‌ ಮಿತ್ತಲ್‌ ಹಾಜರಿದ್ದರು
ಬೀರೂರು ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿ ಮಾತನಾಡಿದರು. ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಮೈಸೂರು ಡಿಆರ್‌ಎಂ ಮುದಿತ್‌ ಮಿತ್ತಲ್‌ ಹಾಜರಿದ್ದರು   

ಬೀರೂರು (ಕಡೂರು): ರಾಜ್ಯದಲ್ಲಿ ರೈಲ್ವೆ ಲೈನ್‌ಗಳ ವಿದ್ಯುದ್ಧೀಕರಣ ಕಾಮಗಾರಿ ಶೇ 97ರಷ್ಟು ಪೂರ್ಣಗೊಂಡಿದ್ದು ವರ್ಷಾಂತ್ಯಕ್ಕೆ ಶೇ100 ಸಾಧಿಸುವ ಗುರಿ ಇದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಿಲ್ದಾಣ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನವಾದ ಬಳಿಕ ರಾಜ್ಯದಲ್ಲಿ ಇಲಾಖೆಯ ಕಾರ್ಯಗಳು ವೇಗ ಪಡೆದಿವೆ. ₹3300 ಕೋಟಿ ವೆಚ್ಚದಲ್ಲಿ 1,216 ಎಕರೆ ಭೂಸ್ವಾಧೀನದ ಮೂಲಕ ವಿಸ್ತರಣೆಗೆ ಇದ್ದ ಅಡಚಣೆ ತೆರವುಗೊಳಿಸಿದ್ದು ಇದೊಂದು ದಾಖಲೆಯಾಗಿದೆ. ಸಚಿವರಾದ ಬಳಿಕ ರಾಜ್ಯದ 28 ಜಿಲ್ಲೆಗಳಿಗೆ ಭೇಟಿ ಕೊಟ್ಟು ನನೆಗುದಿಗೆ ಬಿದ್ದ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅಮೃತಭಾರತ್‌ ಯೋಜನೆಯಡಿ ಬೀರೂರು ಮತ್ತು ಕಡೂರು ನಿಲ್ದಾಣಗಳನ್ನು ತಲಾ ₹ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ 2027-28ರ ವೇಳೆಗೆ ಮುಗಿಯಲಿದೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ವಿಷಯದಲ್ಲಿ ಆಂದೋಲನವೇ ನಡೆದಿದೆ. ಈಗಾಗಲೇ 644 ಮೇಲ್ಸೇತುವೆ ನಿರ್ಮಿಸಲಾಗಿದೆ.1662 ಕಿ.ಮೀ ಹೊಸಲೈನ್‌ ಅಳವಡಿಕೆ ಪ್ರಗತಿಯಲ್ಲಿದೆ ಎಂದರು.

ರಾಜ್ಯದ ಎಲ್ಲ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ಹೊಂದಲಾಗಿದೆ. ಅಂಗವಿಕಲರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಲಿಫ್ಟ್‌, ಎಸ್ಕಲೇಟರ್‌ ಅಳವಡಿಸುವ ಉದ್ದೇಶವಿದೆ.

ದೇಶದಲ್ಲಿ ಈವರೆಗೆ 144 ವಂದೇ ಭಾರತ್‌ ರೈಲು ಸಂಚರಿಸುತ್ತಿದ್ದು, ನ.7ರಂದು ಪ್ರಧಾನಿ 4 ಹೊಸ ರೈಲುಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಪೈಕಿ ರಾಜ್ಯಕ್ಕೆ ಮತ್ತೊಂದು (ಎರ್ನಾಕುಲಂ-ಬೆಂಗಳೂರು) ವಂದೇಭಾರತ್‌ ಸಂಚರಿಸಲಿದೆ. ಈ ಭಾಗದ ಜನರ ನಿಲುಗಡೆ ಬೇಡಿಕೆ ಗಮನದಲ್ಲಿದ್ದು ಅದನ್ನು ಶೀಘ್ರ ಈಡೇರಿಸಲಾಗುವುದು. ರಾಜ್ಯದಲ್ಲಿ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ-ಚಿತ್ರದುರ್ಗ ಮೊದಲಾದ ಲೈನ್‌ಗಳ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಬೀರೂರು ನಿಲ್ದಾಣಕ್ಕೆ ಸಂಬಂಧಿಸಿದಂತೆ 1918ರಲ್ಲಿ ಮಹಾರಾಜರ ಅವಧಿಯಲ್ಲಿ ಮಂಜೂರಾದ 184 ಎಕರೆ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ನಾಗರಿಕರ ಮನವಿಯನ್ನು ಗುರುತು ಮಾಡಿಕೊಳ್ಳುವಂತೆ ಕಾಮಗಾರಿ ಅಧಿಕಾರಿ ಬಷೀರ್‌ಗೆ ಸೂಚಿಸಿದರು.

ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ರಾಜ್ಯ ದೇಶದಲ್ಲಿ 21ನೇ ಸ್ಥಾನದಲ್ಲಿದ್ದು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕೇಂದ್ರ ಸರ್ಕಾರ ಶುದ್ಧ ಕುಡಿಯುವ ನೀರು ಪೂರೈಕೆ ₹5 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದು ಹಣ ನೀಡಲು ಸಿದ್ಧವಿದೆ. ಬಳಕೆಯ ಪ್ರಮಾಣಪತ್ರ (ಯುಟಿಲೈಸೈಷನ್‌ ಸರ್ಟಿಫಿಕೆಟ್‌) ಕೊಡಿ ಎಂದರೆ ಕೊಡುವುದಿಲ್ಲ. ಕೇಂದ್ರದ ಪಾರದರ್ಶಕ ವ್ಯವಸ್ಥೆಯಲ್ಲಿ ಇದು ಒಪ್ಪುವ ವಿಷಯವಲ್ಲ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್‌ ಮಿತ್ತಲ್‌, ಕಡೂರು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಉಪಾಧ್ಯಕ್ಷೆ ಸವಿತಾ ರಮೇಶ್‌, ಕಾಂಗ್ರೆಸ್‌ ಮುಖಂಡ ಬೀರೂರು ದೇವರಾಜ್‌, ರೈಲ್ವೆ ಬಳಕೆದಾರರ ವೇದಿಕೆಯ ವಿನಯ್‌ಕುಮಾರ್‌, ರೈಲ್ವೆ ಇಲಾಖೆ ಅಧಿಕಾರಿಗಳು, ನಾಗರಿಕರು ಇದ್ದರು.

‘ಅವಘಡ ತಡೆಗೆ ರೈಲ್ವೆ ಕವಚ ಅಳವಡಿಕೆ’

ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ವಿನೂತನ ತಂತ್ರಜ್ಞಾನದಲ್ಲಿ ರೈಲ್ವೆ ಕವಚವನ್ನು ಅಳವಡಿಸಲಾಗುತ್ತಿದ್ದು ಇದರಿಂದ ಒಂದೇ ಲೈನ್‌ನಲ್ಲಿ 2 ರೈಲುಗಳು ಸಂಚರಿಸಿ ಸಂಭವಿಸಬಹುದಾದ ಅಪಘಾತ ತಪ್ಪಿಸಲು ನೆರವಾಗಲಿದೆ. ಕನಿಷ್ಠ 50 ಅಡಿ ದೂರದಲ್ಲಿ ಕೂಡ ಚಲಿಸುತ್ತಿದ್ದ ರೈಲುಗಳು ನಿಲ್ಲುವ ತಂತ್ರಜ್ಞಾನವಿದೆ. ಇದಕ್ಕಾಗಿ ₹ 3500 ಕೋಟಿ ವೆಚ್ಚದಲ್ಲಿ 1700 ಕಿ.ಮೀ ಟ್ರ್ಯಾಕ್‌ಗಳಲ್ಲಿ ಕವಚ ಅಳವಡಿಸಲಾಗುವುದು ಎಂದು ಸಚಿವ ಸೋಮಣ್ಣ ವಿವರಿಸಿದರು.