
ತರೀಕೆರೆ: ಪಟ್ಟಣದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ (ಮ್ಯಾಮ್‍ಕೋಸ್) ಶಾಖಾ ಕಚೇರಿಯಲ್ಲಿ ಈಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಗುರುಪುರ ಗ್ರಾಮದ ವೆಂಕಟೇಶ್ ಅವರ ಪತ್ನಿಗೆ ₹6 ಲಕ್ಷ ಪರಿಹಾರದ ಚೆಕ್ ಅನ್ನು ಮ್ಯಾಮ್‍ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ವಿತರಿಸಿದರು.
ಚೆಕ್ ವಿತರಿಸಿ ಮಾತನಾಡಿದ ಮಹೇಶ್, ನಮ್ಮ ಸಂಸ್ಥೆಯ ಷೇರುದಾರರಿಗೆ 2010ರಲ್ಲಿ ಗುಂಪು ವಿಮೆ ಆರಂಭಿಸಿದೆ. ಇಂತಹ ಅವಘಡಗಳು ಸಂಭವಿಸಿದಾಗ ಪ್ರಾರಂಭದಲ್ಲಿ ₹1 ಲಕ್ಷ ಪರಿಹಾರ ನಿಗಧಿಯಾಗಿತ್ತು. ಸದ್ಯ ₹ 6 ಲಕ್ಷಕ್ಕೆ ಏರಿಸಲಾಗಿದೆ. ಇದೆಲ್ಲ ಸಂಸ್ಥೆಯ ಷೇರುದಾರರ ಸಹಕಾರದಿಂದ ಸಾಧ‍್ಯವಾಗಿದೆ ಎಂದರು.
ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಗಾರರಿದ್ದು, ತಾವು ಬೆಳೆದ ಅಡಿಕೆಯನ್ನು ಮ್ಯಾಮ್‍ಕೋಸ್‌ನಲ್ಲೇ ಮಾರಾಟ ಮಾಡುವುದರಿಂದ ಸಂಸ್ಥೆಯು ಬೆಳೆದು, ಷೇರುದಾರರ ಹಿತಾಸಕ್ತಿಯನ್ನು ಕಾಪಾಡಲು ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯ ಸ್ಥಿರತೆಯನ್ನು ಕಾಪಾಡಿಕೊಂಡು ಬರುವಲ್ಲಿ ಸಂಸ್ಥೆಯು ವಿಶೇಷ ಕಾಳಜಿಯನ್ನು ವಹಿಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಅಂತ್ಯ ಸಂಸ್ಕಾರಕ್ಕೂ ₹5000 ಪರಿಹಾರ ನೀಡುವ ಚಿಂತನೆ ನಡೆದಿದೆ ಎಂದರು.
ಮ್ಯಾಮ್‍ಕೋಸ್‍ನ ತರೀಕೆರೆ ನಿರ್ದೇಶಕ ಟಿ.ಎಲ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಸಂದೀಪ್, ಷೇರುದಾರರಾದ ಎಸ್.ಸುರೇಶ್‍ಚಂದ್ರ, ಲೋಕೇಶ್, ಮಲ್ಲಿಕಾರ್ಜುನ, ಮಲ್ಲಪ್ಪ, ಶಿವಮೂರ್ತಿ, ಈಶಣ್ಣ, ಸುರೇಶ್ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.