ADVERTISEMENT

ಮೂಡಿಗೆರೆ | ಹಗಲಿನಲ್ಲೇ ದಾಳಿ ಮಾಡಿದ ಕಾಡಾನೆಗಳು: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 15:13 IST
Last Updated 6 ಆಗಸ್ಟ್ 2024, 15:13 IST
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು   

ಮೂಡಿಗೆರೆ: ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲುಮರ ಗ್ರಾಮದ ಬಳಿ ಮಂಗಳವಾರ 19ಕಾಡಾನೆಗಳ ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ.

15 ದಿನಗಳಿಂದಲೂ ಗೋಣಿಬೀಡು ಗ್ರಾಮದ ಕಸ್ಕೇಬೈಲ್, ಆನೆದಿಬ್ಬ, ಹೊಸಪುರ, ಗಾಡಿಚೌಕ, ಕಲ್ಲುಗುಡ್ಡ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದವು. ಗುಂಪಾಗಿ ದಾಳಿ ನಡೆಸುತ್ತಿದ್ದ ತಂಡದಲ್ಲಿ 13 ಕಾಡಾನೆಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಸಾಲುಮರ ಮುಖ್ಯ ರಸ್ತೆಯಲ್ಲಿ ಕಾಫಿ ತೋಟದಿಂದ ಅರಣ್ಯ ಪ್ರದೇಶಕ್ಕೆ 19ಕಾಡಾನೆಗಳು ದಾಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಾಡಾನೆಗಳು ಕಸ್ಕೇಬೈಲ್ ಚರ್ಚ್ ಹಾಲ್ ಬಳಿಕ ಇಂದ್ರೇಶ್ ಎಂಬುವವರ ತೋಟದಲ್ಲಿ ಬೀಡು ಬಿಟ್ಟಿದ್ದು, ಅಪಾರ ಪ್ರಮಾಣದ ಕಾಫಿ ಗಿಡಗಳು ಹಾನಿಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾಡಾನೆಗಳನ್ನು ಓಡಿಸುವ ಕಾರ್ಯದಲ್ಲಿ ತೊಡಗಿದ್ದು, ಗೋಣಿಬೀಡು, ಕಸ್ಕೇಬೈಲ್, ಆನೆದಿಬ್ಬ, ಹೊಸಪುರ ಸೇರಿದಂತೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಪ್ರದೇಶದವರೆಗೂ ಮಂಗಳವಾರ ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಸ್ಥಬ್ಧವಾಗಿದ್ದವು.

ADVERTISEMENT
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು
ಶಾಶ್ವತ ಯೋಜನೆ ರೂಪಿಸಿ
‘ಒಂದು ಕಾಡಾನೆ ದಾಳಿ ನಡೆಸಿದರೇ ಹತ್ತಾರು ಕಾಫಿ ಗಿಡಗಳು ನಾಶವಾಗುತ್ತವೆ. ಆದರೆ ಇಲ್ಲಿ 19 ಕಾಡಾನೆಗಳು ಏಕಕಾಲದಲ್ಲಿ ದಾಳಿ ನಡೆಸಿದರೆ ಕಾಫಿ ತೋಟಗಳು ಉಳಿಯುವುದಿಲ್ಲ. ಕಾಡಾನೆಗಳೊಂದಿಗೆ ನಾಲ್ಕೈದು ಮರಿಗಳು ಇರುವುದರಿಂದ ಹೆಚ್ಚು ದೂರ ಕ್ರಮಿಸದೇ ಸುತ್ತಮುತ್ತಲ ತೋಟಗಳಲ್ಲಿಯೇ ತಿರುಗಾಡುತ್ತಿರುವುದರಿಂದ ಬೆಳೆ ನಾಶವಾಗುತ್ತಿದೆ. ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಎಷ್ಟೇ ಅರಣ್ಯಕ್ಕೆ ಓಡಿಸಿದರೂ ಪುನಃ ಗ್ರಾಮದೊಳಕ್ಕೆ ಬರುವುದರಿಂದ ಕಾಡಾನೆಗಳ ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರವಾಗಿದೆ. ಜನಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸಿ ಜಾರಿಗೊಳಿಸಬೇಕು’ ಎನ್ನುತ್ತಾರೆ ಗ್ರಾಮದ ಸುಂದ್ರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.