
ಶೃಂಗೇರಿ: ‘ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ದುರದೃಷ್ಟವಾಗಿ ಈ ದುರಂತ ಸಂಭವಿಸಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗೆ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಮನೆಗೆ ಭೇಟಿ ನೀಡಿ, ಬಳಿಕ ಅವರು ಮಾತನಾಡಿದರು.
‘ಮನುಷ್ಯನ ಜೀವವೂ ಉಳಿಯಬೇಕು, ಪ್ರಾಣಿಯ ಸಂಕುಲವೂ ಉಳಿಯಬೇಕು. ಇಂದು ಆನೆಗಳ ಸಂಖ್ಯೆ, ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ನೈಸರ್ಗಿಕ ಸಂಪತ್ತಿನಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ. ನಗರೀಕರಣದಿಂದಾಗಿ ಅರಣ್ಯದ ವಿಸ್ತೀರ್ಣ ಕಡಿಮೆ ಆಗುತ್ತಿದೆ. ಪ್ರಾಣಿಗಳ ದಾಳಿಯಿಂದಾಗಿ ರಾಜ್ಯದಲ್ಲಿ 30 ರಿಂದ 40 ಜನರು ಮೃತಪಟ್ಟ ಘಟನೆಗಳು ಸಂಭವಿಸುತ್ತಿದೆ. ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಕುಟುಂಬದ ನೋವಿನ ಜೊತೆಗೆ ಇಲಾಖೆ ಹಾಗೂ ನಾವು ಸದಾ ಇರುತ್ತೇವೆ. ಅವರ ಕುಟುಂಬದ ಕಷ್ಟ ಸುಖಕ್ಕೆ ಸ್ಪಂದಿಸಲಿದೆ ಎಂದು ಹೇಳಿದರು.
ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹20 ಲಕ್ಷ ನೀಡಲಾಗಿದೆ. ವೈಯಕ್ತಿಕವಾಗಿ ಎರಡು ಕುಟುಂಬಕ್ಕೆ ತಲಾ ₹5 ಲಕ್ಷ ಮತ್ತು ಶಾಸಕ ಟಿ.ಡಿ ರಾಜೇಗೌಡರು ಎರಡು ಕುಟುಂಬಕ್ಕೆ ತಲಾ ₹1 ಲಕ್ಷವನ್ನು ಶಾಸಕ ಟಿ.ಡಿ.ರಾಜೇಗೌಡರ ಮೂಲಕ ತಲುಪಿಸಲಾಗುತ್ತದೆ. ಕಾಯಂ ಆಗಿ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲದೇ ಇರುವುದರಿಂದ ಕಟುಂಬದಲ್ಲಿನ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗವನ್ನು ತಕ್ಷಣವೇ ನೀಡಲು ಸೂಚಿಸಲಾಗಿದೆ. ಪರಿಹಾರದ ಧನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದಾರೆ. ಆನೆ ಯಾವ ಸಮಯದಲ್ಲಿ ಬರುತ್ತವೆ. ಹೇಗೆ ಬರುತ್ತವೆ, ಎಂದು ಗೊತ್ತಾಗುವುದಿಲ್ಲ' ಎಂದರು.
ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕಾಡಾ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್‍ಪಿ ವಿಕ್ರಮ್ ಅಮ್ಟೆ, ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ವನ್ಯಜೀವಿ ವಿಭಾಗದ ಡಿಎಫ್‍ಒ ಶಿವರಾಮ್ ಬಾಬು, ಎಸಿಎಫ್ ಮೋಹನ್ ಕುಮಾರ್, ವಲಯಾ ಅರಣ್ಯ ಸಂರಕ್ಷಣಾಧಿಕಾರಿ ಮಧುಕರ್, ವನ್ಯಜೀವಿ ವಲಯಾ ಅರಣ್ಯ ಸಂರಕ್ಷಣಾಧಿಕಾರಿ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಪುಟ್ಟಪ್ಪ ಹೆಗ್ಡೆ, ದಿನೇಶ್ ಹೆಗ್ಡೆ, ಎಂ.ಎಚ್ ನಟರಾಜ್, ನೂತನ್ ಕುಮಾರ್, ಭಾಸ್ಕರ್ ನಾಯ್ಕ, ವೆಂಕಟೇಶ್ ಕುರದಾಮನೆ, ರಾಜೇಶ್ ದ್ಯಾವಂಟು, ಜನಪ್ರತಿನಿಧಿಗಳು, ಕೆರೆಕಟ್ಟೆ ಗ್ರಾಮದ ಸ್ಥಳೀಯ ಮುಖಂಡರು, ಸ್ಥಳೀಯ ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.